ಬಾಳೆಹೊನ್ನೂರಿನ ಮಸೀದಿಕೆರೆ ಆಲ್ ಬದ್ರಿಯಾ ಶಾದಿ ಮಹಲ್‌ನಲ್ಲಿ ಎಸ್‌ಐಆರ್ ಜಾಗೃತಿ ಶಿಬಿರ ನಡೆಯಿತು. 
ಚಿಕ್ಕಮಗಳೂರು

ಸರಿಯಾದ ಮಾಹಿತಿ ನೀಡಿ, ಮತದಾನದ ಹಕ್ಕು ಉಳಿಸಿಕೊಳ್ಳಿ

ಬಾಳೆಹೊನ್ನೂರು: ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರು ಸಮರ್ಪಕ ಮಾಹಿತಿ ನೀಡಿ ತಮ್ಮ ಮತದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾತ್‌ನ ಜಿಲ್ಲಾಧ್ಯಕ್ಷ ಜಮೀರ್ ಮೂಸಬ್ಬ ಹೇಳಿದರು.
ಮಸೀದಿಕೆರೆಯ ಆಲ್ ಬದ್ರಿಯಾ ಶಾದಿ ಮಹಲ್‌ನಲ್ಲಿ ಕರ್ನಾಟಕ ಮುಸ್ಲಿಂ ಜಮಾತ್, ಎಸ್‌ವೈಎಸ್, ಎಸ್‌ಎಸ್‌ಎಫ್ ವತಿಯಿಂದ ಆಯೋಜಿಸಿದ್ದ ಎಸ್‌ಐಆರ್ ಜಾಗೃತಿ ಶಿಬಿರದಲ್ಲಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಶೀಘ್ರದಲ್ಲಿ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮತದಾರರು ಸಮಗ್ರವಾಗಿ ತಮ್ಮ ವಿವರಗಳನ್ನು ದಾಖಲಿಸಿ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದರು.
ಯಾವುದೇ ನೈಜ ಮತದಾರರು ತಮ್ಮ ಮತದ ಹಕ್ಕಿನಿಂದ ವಂಚಿರಾಗಬಾರದು. ಕರ್ನಾಟಕ ಮುಸ್ಲಿಂ ಜಮಾತ್‌ನಿಂದ ವಿವಿಧೆಡೆಗಳಲ್ಲಿ ಎಸ್‌ಐಆರ್ ಕುರಿತು ಜಾಗೃತಿ ಅಭಿಯಾನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಎಸ್‌ಐಆರ್‌ನ ಮಾಹಿತಿ ಸಂಗ್ರಹದ ಕುರಿತು ಕರಡು ಪ್ರತಿಗಳನ್ನು ನೀಡಿ ಮಾಹಿತಿ ನೀಡಲಾಗುತ್ತಿದೆ ಎಂದರು.
ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷೆ ಶಶಿಕಲಾ ಉಮೇಶ್, ಉಪಾಧ್ಯಕ್ಷ ಇಬ್ರಾಹಿಂ ಶಾಫಿ, ಲತೀಫ್, ಆಲ್ ಬದ್ರಿಯಾ ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಟಿ.ಟಿ.ಇಸ್ಮಾಯಿಲ್, ಕಾರ್ಯದರ್ಶಿ ಜಲಾಲುದ್ದೀನ್, ಎಸ್‌ವೈಎಸ್ ಯುನಿಟ್ ಅಧ್ಯಕ್ಷ ಶಾಹಿದ್, ಪ್ರಮುಖರಾದ ಉಮರ್, ಎನ್.ಕೆ.ಇಬ್ರಾಹಿಂ, ಸೈದಾಲಿ ಬಾವು, ಜಾಸಿರ್ ಸಖಾಫಿ, ಸಫ್ವಾನ್ ಸಖಾಫಿ ಮತ್ತಿತರರು ಇದ್ದರು.