ಜಿ.ಹೊಸಳ್ಳಿ ಗ್ರಾಮದಲ್ಲಿ ಹಾಡಾನೆ ದಾಳಿಯಿಂದ ಹಾಳಾದ ಕಾಫಿ ತೋಟಕ್ಕೆ ಹೋಬಳಿ ಬೆಳೆಗಾರರ ಸಂಘದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂಡಿಗೆರೆ: ಕಾಡಾನೆಗಳ ಹಾವಳಿಯಿಂದ ಕಾಫಿ ತೋಟಗಳು ನಾಶವಾಗುತ್ತಿದ್ದು, ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದರೆ ಕಾಡಾನೆಗಳು ನಾಡಿಗೆ ಬರದಂತೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಗೋಣಿಬಿಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ.ಎಸ್.ರಮೇಶ್ ಒತ್ತಾಯಿಸಿದರು.
ಜಿ.ಹೊಸಳ್ಳಿ ಗ್ರಾಮದ ಧರ್ಮಣ್ಣ, ಶಂಕರ್, ರಾಮಚಂದ್ರ ಸೇರಿದಂತೆ ಹಲವು ರೈತರ ತೋಟಗಳಿಗೆ ಲಗ್ಗೆಯಿಟ್ಟು ಕಾಫಿ, ಅಡಕೆ, ಕಾಳುಮೆಣಸು, ಬಾಳೆ ಗಿಡಗಳನ್ನು ಕಾಡಾನೆ ಹಿಂಡು ಧ್ವಂಸಗೊಳಿಸಿರುವ ತೋಟಕ್ಕೆ ಸೋಮವಾರ ಗೋಣಿಬಿಡು ಹೋಬಳಿ ಬೆಳೆಗಾರರ ಸಂಘದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಹಿಂದೆ ತಾಲೂಕಿನ ಸಾರಗೋಡು, ಕುಂದೂರು, ತತ್ಕೊಳ, ಕೆಂಜಿಗೆ, ಬೈರಾಪುರ, ಊರುಬಗೆ ಭಾಗದಲ್ಲಿ ಕಾಡಾನೆಗಳ ಹಾವಳಿಯಿತ್ತು. ಈಗ ಹಿಂಡುಗಟ್ಟಲೆ ಕಾಡಾನೆಗಳು ಕೊಡಗು ಮತ್ತು ಹಾಸನ ಜಿಲ್ಲೆಯಿಂದ ಬೇಲೂರಿನ ಕಾನಹಳ್ಳಿ ಮೀಸಲು ಅರಣ್ಯದಿಂದ ಕಸ್ಕೆಬೈಲ್, ಜಿ.ಹೊಸಳ್ಳಿ ಗ್ರಾಮದ ಮೂಲಕ ಗೋಣಿಬೀಡು ಹೋಬಳಿಗೆ ಪ್ರವೇಶಿಸುತ್ತಿದೆ ಎಂದರು.
ಈಗ ನಾಲ್ಕೈದು ಗುಂಪು ಅಲ್ಲಲ್ಲಿ ತಿರುಗಾಡುತ್ತಾ ತೋಟಗಳನ್ನು ಧ್ವಂಸಗೊಳಿಸುತ್ತಿದೆ. ಬೀಟಮ್ಮ ಮತ್ತು ಭೀಮ ಎಂಬ ಒಂದೇ ಗುಂಪಿನಲ್ಲಿ 30 ಕಾಡಾನೆಗಳಿವೆ. ಅದು ಜಿ.ಹೊಹಳ್ಳಿ ಗ್ರಾಮದ ಜನವಸತಿ ಪ್ರದೇಶ ಮತ್ತು ಕಾಫಿ ತೋಟಗಳಲ್ಲಿ ಹೆಚ್ಚಾಗಿ ಬೀಡುಬಿಟ್ಟಿದೆ. ರೈತರು, ಕಾರ್ಮಿಕರು ಜಮೀನಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಶಿಕ್ಷಣದಿಂದ ಅನಿವಾರ್ಯವಾಗಿ ದೂರ ಸರಿಯಬೇಕಾಗಿದೆ. ರೈತರು ಜಮೀನು ಪಾಳು ಬಿಡಬೇಕಾಗಿದೆ ಎಂದು ದೂರಿದರು.
ತಾಲೂಕಿನಲ್ಲಿ ಕಾಡಾನೆ ಉಪಟಳ ಮಿತಿಮೀರಿದೆ. ಸರ್ಕಾರ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ರೈತರ ಜಮೀನು, ಬೆಳೆ, ಇತರೆ ಹಾನಿಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.