ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿ ಶಂಕರಾಪುರ ಗ್ರಾಮಸ್ಥರು ಗ್ರಾಪಂ ಎದುರು ಖಾಲಿ ಕೊಡ ಇಟ್ಟು ಪ್ರತಿಭಟನೆ ನಡೆಸಿದರು. 
ಚಿಕ್ಕಮಗಳೂರು

ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿ ಎದುರು ಕೊಡ ಇಟ್ಟು ಪ್ರತಿಭಟನೆ

ಕಡೂರು: ವಿ.ಯರದಕೆರೆ ಪಂಚಾಯತಿ ವ್ಯಾಪ್ತಿಯ ಶಂಕರಾಪುರ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಮಸ್ಯೆ ಪರಿಹಾರಕ್ಕೆ ಪಿಡಿಒ ನಿರ್ಲಕ್ಷೃವಹಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಗ್ರಾಪಂ ಎದುರು ಖಾಲಿ ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಬೋರ್‌ವೆಲ್ ಮತ್ತು ಪೈಪ್‌ಲೈನ್‌ನಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ಪಂಚಾಯತಿಗೆ ಲಿಖಿತವಾಗಿ ದೂರು ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇಂದಿಗೂ ಗ್ರಾಮದ ಮನೆಗಳಲ್ಲಿ ನೀರಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಪಂಚಾಯಿತಿ ಅವರು ಕೂಡಲೇ ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಪಿಡಿಒ ಗ್ರಾಮಕ್ಕೆ ಬಂದು ನೀರಿನ ಸಮಸ್ಯೆ ಬಗೆಹರಿಸಬೇಕು, ಗ್ರಾಮಕ್ಕೆ ಪ್ರತೇಕ ನೀರು ಗಂಟಿ ನೇಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಶಂಕರಾಪುರ ಗ್ರಾಮದಲ್ಲಿ ನೀರು ಪೂರೈಕೆ ಕಡಿಮೆಯಾಗಿರುವ ಬಗ್ಗೆ ಟಾಸ್ಕ್ಪೋರ್ಸ್ ಸಮಿತಿ ಸಭೆಯಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮಸ್ಥರ ಬೇಡಿಕೆಯಂತೆ ನೀರು ಪೂರೈಕೆಗೆ ಕ್ರಮವಹಿಸಲಾಗಿದ್ದು, ಬುಧವಾರ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಯತ್ನಿಸಲಾಗುವುದು ಎಂದು ವಿ.ಯರದಕೆರೆ ಗ್ರಾಪಂ ಪಿಡಿಒ ಪಿ.ತನುಜಾ ತಿಳಿಸಿದ್ದಾರೆ.

ಮುಖಂಡರಾದ ಕೃಷ್ಣ ರಾಮಪ್ಪ, ಉಮೇಶ, ರಾಜಪ್ಪ, ದಿನೇಶ್, ರಮೇಶ್, ಸೋಮೇಶ್, ಯೋಗೀಶ್, ಕಲ್ಲೇಶಪ್ಪ, ಜಗದೀಶ್ ಮತ್ತಿತರಿದ್ದರು.