ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಚಿಕ್ಕಮಗಳೂರಿನ ೧೫೦ ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚತ್ತಿರುವುದನ್ನು ವಿರೋಧಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. 
ಚಿಕ್ಕಮಗಳೂರು

ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಸರ್ಕಾರ ಸಂಯೋಜನೆ ಹೆಸರಿನಲ್ಲಿ ೧೩,೮೦೦ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿತ್ತು
  • ಕಾಂಗ್ರೆಸ್ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ೪೦ ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ
ಚಿಕ್ಕಮಗಳೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಚಿಕ್ಕಮಗಳೂರಿನ ೧೫೦ ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚತ್ತಿರುವುದನ್ನು ವಿರೋಧಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಎಐಡಿಎಸ್‌ಒ ರಾಜ್ಯಾಧ್ಯಕ್ಷೆ ಕೆ.ಎಸ್.ಅಶ್ವಿನಿ ಮಾತನಾಡಿ, ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ತಮ್ಮ ಜೀವನವನ್ನೇ ಶಾಲೆಗಳಿಗಾಗಿ ಅರ್ಪಿಸಿದರು. ಕಳೆದ ಬಿಜೆಪಿ ಸರ್ಕಾರ ಸಂಯೋಜನೆ ಹೆಸರಿನಲ್ಲಿ ೧೩,೮೦೦ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿತ್ತು. ಆಗ ಇಡೀ ರಾಜ್ಯದಾದ್ಯಂತ ಹೋರಾಟ ಮಾಡಿ ಸರ್ಕಾರಿ ಶಾಲೆಗಳನ್ನು ಉಳಿಸಿದ್ದೆವು. ಪ್ರಸ್ತುತ ಅಧಿಕಾರದಲ್ಲಿರುವ  ಕಾಂಗ್ರೆಸ್ ಸರ್ಕಾರ  ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ೪೦ ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಒಟ್ಟಾರೆ ಎಲ್ಲ ಸರ್ಕಾರಗಳ ಅಂತಿಮ ಗುರಿ ಸರ್ಕಾರಿ ಶಾಲೆಗಳನ್ನು ಮುಚ್ಚಿ, ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವುದೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿAದ ೨,೫೦೦ ಕೋಟಿ ರೂ. ಸಾಲ ಮಾಡಿ ತೆರೆಯುತ್ತಿದೆ.  ಖಾಸಗಿ ಬ್ಯಾಂಕಿನಿAದ ಸಾಲ ಪಡೆದು ಸರ್ಕಾರಿ ಶಾಲೆಗಳನ್ನು ನಡೆಸುವಂತಹ ಕೆಟ್ಟ ಪರಿಸ್ಥಿತಿಗೆ ಸರ್ಕಾರ ಬಂದಿದೆಯೇ ಎಂದು ಪ್ರಶ್ನಿಸಿದ ಅವರು, ನಾವು ಕಟ್ಟುತ್ತಿರುವ ತೆರಿಗೆಯು ಸಾಲುತ್ತಿಲ್ಲವೇ ಎಂದು ಟೀಕಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಹೊರಗುತ್ತಿಗೆ ನೀಡಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನಾಗಿ ಪರಿವರ್ತಿಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಪ್ರತಿಯೊಂದು ಕಿಲೋಮೀಟರ್ ವ್ಯಾಪ್ತಿಯ ಒಳಗೆ ಪ್ರಾಥಮಿಕ ಶಾಲೆ ಇರಬೇಕೆನ್ನುವ ಶಿಕ್ಷಣ ಹಕ್ಕು ಕಾಯ್ದೆಯನ್ನು  ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಉಲ್ಲಂಘಿಸುತ್ತದೆ ಎಂದರು. 
ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೫ ಮ್ಯಾಗ್ನೆಟ್ ಶಾಲೆಗಳನ್ನು ಆಯ್ಕೆ ಮಾಡಿ ೧೫೦ಕ್ಕೂ ಹೆಚ್ಚು ಶಾಲೆಗಳನ್ನು ವಿಲೀನ ಮಾಡುವ ನೆಪದಲ್ಲಿ ಮುಚ್ಚಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಗುಡ್ಡಗಾಡು ಪ್ರದೇಶ. ಎಷ್ಟೋ ಹಳ್ಳಿಗಳಿಗೆ ನಡೆದು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ರಸ್ತೆಗಳಿವೆ. ಹೀಗಿದ್ದ ಪರಿಸ್ಥಿತಿಯಲ್ಲಿ ಬಸ್ ವ್ಯವಸ್ಥೆಯನ್ನು ಸರ್ಕಾರ ಹೇಗೆ ಒದಗಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಇಲ್ಲಿನ ಬಹುತೇಕ ಪಾಲಕರು ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಮಾಡಲು ಹೋಗುತ್ತಾರೆ. ಸುತ್ತಮುತ್ತ ಕಾಡಿನ ಪ್ರದೇಶ ಆಗಿರುವುದರಿಂದ ಪ್ರಾಣಿಗಳ ಸಮಸ್ಯೆಯೂ ಕೂಡ ಇದೆ. ಇಂತಹ ಪರಿಸ್ಥಿತಿಯಲ್ಲಿ ಪಾಲಕರು ಯಾವ ನಂಬಿಕೆಯ ಮೇಲೆ ತಮ್ಮ ಮಕ್ಕಳನ್ನು ಕಿಲೋಮೀಟರ್ ಗಟ್ಟಲೆ ಇನ್ನೊಂದು ಹಳ್ಳಿಯ ಶಾಲೆಗೆ ಕಳುಹಿಸಲು ಸಾಧ್ಯ. ಆ ಮಕ್ಕಳಿಗೆ ತೊಂದರೆ ಆದಲ್ಲಿ ಯಾರು ಜವಾಬ್ದಾರರು ಎಂದರು.
ಈಗಾಗಲೇ ರಾಜ್ಯದಲ್ಲಿ ೬೨ ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ . ೭ ಸಾವಿರಕ್ಕೂ ಹೆಚ್ಚು ಹೆಚ್ಚು ಏಕೋಪಧ್ಯಾಯ ಶಾಲೆಗಳಿವೆ. ೨೩ ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಕಟ್ಟಡಗಳು ದುರಸ್ತಿಯಾಗಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರಿ ಶಾಲೆಗಳು ಸೊರಗುವಂತೆ ಮಾಡಿ ಸರ್ಕಾರ  ಹಿಂಬಾಗಿಲಿನಿAದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸುನೀಲ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಹೊನ್ನೇಶ್, ಎಐಡಿಎಸ್‌ಒ ಜಿಲ್ಲಾ ಸಂಘಟನಾಕಾರ ಸುನೀಲ್, ಡಿಎಸ್‌ಎಸ್ ಮುಖಂಡ ಲಕ್ಷö್ಮಣ್, ಪ್ರಮುಖರಾದ ಹರೀಶ್, ಚೇತನ್, ಯೋಗೇಶ್, ಅಭಿಷೇಕ್, ಚೈತ್ರಾ ಮತ್ತಿತರರಿದ್ದರು.