ಕಡೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಎಐಸಿಸಿ ವೀಕ್ಷಕ ಡಾ. ಬಿಸ್ವರಂಜನ್ ಮೊಹಂತಿ ಮಾತನಾಡಿದರು. ಬಿ.ಎಂ.ಸಂದೀಪ್, ಅಂಶುಮಂತ್, ಮೋಹನ್, ಬಾಸೂರು ಚಂದ್ರಮೌಳಿ, ಕಲ್ಲೇಶ್ ಇತರರಿದ್ದರು. 
ಚಿಕ್ಕಮಗಳೂರು

ಪ್ರಜಾಪ್ರಭುತ್ವ , ಸಂವಿಧಾನ ರಕ್ಷಣೆ ಕಾಂಗ್ರೆಸ್ ಧ್ಯೇಯ

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ವೀಕ್ಷಕ
  • ಡಾ. ಬಿಸ್ವರಂಜನ್ ಮೊಹಂತಿ ಹೇಳಿಕೆ
ಕಡೂರು: ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸುವುದು ಕಾಂಗ್ರೆಸ್ ಧ್ಯೇಯವಾಗಿದ್ದು, ನಾವೆಲ್ಲರೂ ಪಕ್ಷ ಸಂಘಟನೆಗೆ ಬಲಪಡಿಸಲು ಪ್ರಾಮುಖ್ಯತೆ ನೀಡಬೇಕು ಎಂದು ಎಐಸಿಸಿ ವೀಕ್ಷಕ ಡಾ. ಬಿಸ್ವರಂಜನ್ ಮೊಹಂತಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಕಡೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹದ ಸಂಘಟನಾ ಸೃಜನ್ ಸಭೆಯಲ್ಲಿ ಮಾತನಾಡಿ, ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತುಕೊಡಲಾಗುತ್ತಿದೆ. ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬಾಗಿದ್ದಾರೆ. ಕರ್ನಾಟಕ ಪ್ರಬುದ್ಧ ರಾಜ್ಯವಾಗಿದ್ದು, ಕಾಂಗ್ರೆಸ್‌ಗೆ ಸಂಕಷ್ಟದ ಕಾಲಗಳಲ್ಲಿ ಪಕ್ಷಕ್ಕೆ ಗಟ್ಟಿ ನೆಲೆ ಒದಗಿಸಿದೆ. ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ನೆಲವೂ ಇದಾಗಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದಾಗಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕದ ಮೂಲಕ ಪಕ್ಷವನ್ನು ಗಟ್ಟಿಗೊಳಿಸಲು ಮತ್ತು ಸಂಘಟಿಸಲು ಎಐಸಿಸಿ ಸೂಚನೆ ಮೇರೆಗೆ ಅಭಿಯಾನ ಆರಂಭಿಸಲಾಗಿದೆ. ಕಾಂಗ್ರೆಸ್ ವಿಚಾರಧಾರೆಯನ್ನು ಹೊಂದಿದ ಭವಿಷ್ಯದ ನಾಯಕರನ್ನು ಗುರುತಿಸುವುದೂ ಸಂಘಟನೆ  ಉದ್ದೇಶ ಎಂದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, 2025-26ನೇ ಸಾಲಿನಲ್ಲಿ 1080 ಡಿಸಿಸಿ ಮತ್ತು ನಗರ ಕಾಂಗ್ರೆಸ್ ಘಟಕಗಳಿಗೆ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ನಡೆದಿದೆ. 750ಕ್ಕೂ ಹೆಚ್ಚು ಕಡೆ ನೇಮಕ ಸಂಪೂರ್ಣಗೊಂಡಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧವಾಗಿ ರೈತರು, ಮಹಿಳೆಯರು, ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಕಾಂಗ್ರೆಸ್ ಅವರ ಧ್ವನಿ ಬೆಂಬಲಿಸಿದೆ. ಬಿಜೆಪಿ ವಿರೋಧಿ ಅಲೆಯನ್ನು ಸದ್ಬಳಕೆ ಮಾಡಿಕೊಳ್ಳಲು ಬೂತ್ ಹಂತದಿಂದಲೂ ಮತ್ತಷ್ಟು ಬಲಪಡಿಸಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದರು.
ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಪಕ್ಷ ಸಂಘಟನೆಗೆ ಕಾರ್ಯಕರ್ತರೇ ಶಕ್ತಿಮೂಲವಾಗಿದ್ದು , ಎಐಸಿಸಿ ನಿರ್ದೇಶನದ ಮೇರೆಗೆ ಸಂಘಟನ್ ಸೃಜನ್ ಅಭಿಯಾನ ನಡೆಯುತ್ತಿದೆ. ಎಸ್‌ಐಆರ್ ಪ್ರಕ್ರಿಯೆ ಸಂದರ್ಭದಲ್ಲಿಯೂ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ಡಿಸಿಸಿ ಅಧ್ಯಕ್ಷರ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ವೀಕ್ಷಕರು ಆಗಮಿಸಿದ್ದು ಸಂಘಟನೆಗೂ ಸಲಹೆ, ಸೂಚನೆಗಳನ್ನು ನೀಡುವಂತೆ ಕೋರಿದರು.
ಕೆಪಿಸಿಸಿ ಉಪಾಧ್ಯಕ್ಷ ಗಫೂರ್‌ಸಾಬ್, ಚಿಕ್ಕಮಗಳೂರು ಉಸ್ತುವಾರಿ ಮೋಹನ್, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಇಂದಿರಾ ಕ್ಯಾಂಟೀನ್ ಮೇಲುಸ್ತುವಾರಿ ಸಮಿತಿ ರಾಜ್ಯ ಅಧ್ಯಕ್ಷ ಪಿ.ಸಿ.ಪ್ರಸನ್ನ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ, ಸುಧೀರ್‌ಕುಮಾರ್ ಮುರೊಳ್ಳಿ, ವಕ್ತಾರ ರವೀಶ್ ಕ್ಯಾತನಬೀಡು, ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಬೀರೂರು ಬ್ಲಾಕ್ ಅಧ್ಯಕ್ಷ ಟಿ.ಕಲ್ಲೇಶ್, ಮಂಜೇಗೌಡ , ಮೋಹನ್‌ಕುಮಾರ್, ಜಿಲ್ಲೆಯ ವಿವಿಧ ತಾಲೂಕುಗಳ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.