ಶೃಂಗೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಟ್ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿದ ಸ್ಕಂದ ಅವರನ್ನು ಸನ್ಮಾನಿಸಲಾಯಿತು.  
ಚಿಕ್ಕಮಗಳೂರು

ಆತ್ಮವಿಶ್ವಾಸದಿಂದ ಮುನ್ನಡೆದಾಗ ಜೀವನದಲ್ಲಿ ಉನ್ನತಿ

ಜಿ.ಹೆಚ್. ಧನ್ಯಕುಮಾರ್
ಶೃಂಗೇರಿ: ವೃತ್ತಿ ಮಾರ್ಗದರ್ಶನ ಎಂದರೆ ಜನರು ತಮ್ಮ ಶಿಕ್ಷಣ ತರಬೇತಿ ಹಾಗೂ ಉದ್ಯೋಗಗಳನ್ನು ಆಯ್ಕೆ ಮಾಡಲು ಮತ್ತು ನಿರ್ವಹಿಸಲು ಸಹಾಯ ಮಾಡುವ ಸೇವೆ ಎಂದು ಜ್ಞಾನಂ ಪಿಯು ಕಾಲೇಜಿನ ಪ್ರಾಚಾರ್ಯ ಟಿ.ಎಸ್. ಕುಮಾರ್ ತಿಳಿಸಿದರು.
ಪಟ್ಟಣದ ಜ್ಞಾನ ಭಾರತೀ ವಿದ್ಯಾಕೇಂದ್ರದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ಚಿಗುರು ಇಂಟರಾಕ್ಟ್ ಕಬ್ಲ್‌ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಆಯ್ಕೆ ಮಾಡಲು ಕೌಶಲ್ಯಗಳ ಬಲವರ್ಧನೆಗೆ ಹೆಚ್ಚು ಒತ್ತು ನೀಡಬೇಕು. ತಮ್ಮಲ್ಲಿರವ ಕೌಶಲ್ಯ ಗುರುತಿಸಲು ಸ್ವಯಂ ಮೌಲ್ಯಮಾಪನ ಅಗತ್ಯ. ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ವಿಶಿಷ್ಟ ಸಾಮರ್ಥ್ಯಗಳು, ಮೌಲ್ಯಗಳು ಮತ್ತು ನೈಸರ್ಗಿಕ ಪ್ರತಿಭೆಗಳನ್ನು ಅನ್ವೇಷಿಸುವ ಸೂಕ್ಷ್ಮತೆ ಇರಬೇಕು. ಸ್ಪಷ್ಟವಾದ ಗುರಿ, ನಿಖರವಾದ ಶಿಕ್ಷಣದ ಜತೆಗೆ ಆತ್ಮವಿಶ್ವಾಸದಿಂದ ಮುನ್ನಡೆದಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದರು.
ಇಂಟರಾಕ್ಟ್ ಸಂಸ್ಥೆ ಸಂಯೋಜಕ ಅಂಬಲಮನೆ ಸುಬ್ರಹ್ಮಣ್ಯ ಮಾತನಾಡಿ, ರೋಟರಿ ಸಂಸ್ಥೆ ಪ್ರಾಯೋಜಕತ್ವದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸ್ಥಾಪಿತಗೊಂಡ ಇಂಟರಾಕ್ಟ್ ಸಂಸ್ಥೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಪೂರಕ. ಶಿಕ್ಷಣದ ಜತೆ ಸೇವಾ ಮನೋಭಾವ ಬೆಳೆಸುವ ಸಂಸ್ಥೆ ಮೂಲಕ ವಿದ್ಯಾರ್ಥಿಗಳು ಪರಿಸರ ಸ್ವಚ್ಛತಾ ಅಭಿಯಾನ,ಭಾಷಣಕಲೆ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮುಂತಾದ ಕಾರ್ಯಕ್ರಮ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಪರಿಮೂಡಿಸಲು ರೋಟರಿ ಕ್ಲಬ್ ನಿರಂತರ ಸಹಕಾರ ನೀಡುತ್ತದೆ ಎಂದರು.
ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸ್ಕಂದ ಅವರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಎಸ್.ಎ.ಸುರೇಶ್‌ಹೆಗಡೆ, ಕಾರ್ಯದರ್ಶಿ ಸುಮಿತ್.ಡಿ, ಮುಖ್ಯಶಿಕ್ಷಕ ಶಂಕರನಾರಾಯಣ ಉಪಸ್ಥಿತರಿದ್ದರು.