ಎನ್.ಆರ್.ಪುರ ತಾಲೂಕಿನ ಸುತ್ತಾ ಗ್ರಾಮದಲ್ಲಿ ಯಂತ್ರಶ್ರೀ ಭತ್ತದ ನಾಟಿಗೆ ಸಸಿಮಡಿ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಸಿ ಎಸ್‌ಸಿ ಯೋಜನಾಧಿಕಾರಿ ದಯಾನಂದ್ ಉದ್ಘಾಟಿಸಿದರು.
- ಭತ್ತದ ನಾಟಿಗೆ ಸಸಿಮಡಿ ತಯಾರಿಕೆ ಪ್ರಾತ್ಯಕ್ಷಿಕೆ
- ಯಂತ್ರಶ್ರೀ ನಾಟಿಯಿಂದ ಖರ್ಚು ಕಡಿಮೆ
ಎನ್.ಆರ್.ಪುರ: ಯಂತ್ರಶ್ರೀ ಮೂಲಕ ಭತ್ತದ ನಾಟಿ ಮಾಡುವುದರಿಂದ ಖರ್ಚು ಕಡಿಮೆಯಾಗಿ ಲಾಭ ಜಾಸ್ತಿಯಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಸಿಎಸ್‌ಸಿ ಯೋಜನಾಧಿಕಾರಿ ದಯಾನಂದ್ ತಿಳಿಸಿದರು.
ಸುತ್ತಾ ಗ್ರಾಮದ ಗಣಪತಿ ಪೆಂಡಾಲ್‌ನಲ್ಲಿ ಬಿ.ಎಚ್.ಕೈಮರ ವಲಯದ ವಗ್ಗಡೆಕಲ್ಲು ಕಾರ್ಯಕ್ಷೇತ್ರದ ಆಶ್ರಯದಲ್ಲಿ ನಡೆದ ಯಂತ್ರಶ್ರೀ ಭತ್ತದ ನಾಟಿಗೆ ಸಸಿಮಡಿ ತಯಾರಿಕೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೂಲಿಯಾಳಿನ ಸಂಬಳ ಜಾಸ್ತಿಯಾಗಿದೆ. ಆಧುನಿಕ ಯುಗದಲ್ಲಿ ಯಂತ್ರಶ್ರೀ ಭತ್ತದ ನಾಟಿ ಮಾಡಿದರೆ ಕೂಲಿಯಾಳುಗಳ ಸಮಸ್ಯೆ ಪರಿಹಾರವಾಗಲಿದೆ. ಇಳುವರಿಯೂ ಜಾಸ್ತಿ ಬರಲಿದೆ. ಯಂತ್ರಶ್ರೀ ನಾಟಿಗೂ, ಕೂಲಿಕಾರ್ಮಿಕರ ನಾಟಿಗೂ ತುಂಬ ವ್ಯತ್ಯಾಸವಿದೆ. ಕೂಲಿಯಾಳುಗಳ ಮೂಲಕ ನಾಟಿ ಮಾಡುವುದನ್ನು ಹೋಲಿಕೆ ಮಾಡಿದರೆ ಯಂತ್ರಶ್ರೀ ನಾಟಿಯಿಂದ ಖರ್ಚು ಕಡಿಮೆಯಾಗುತ್ತದೆ. ರೈತರು ಹಿಂದಿನ ಪದ್ಧತಿ ಬಿಟ್ಟು ಯಂತ್ರಶ್ರೀ ಪದ್ಧತಿಯಲ್ಲಿ ನಾಟಿ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಂಜಿತಾ ಮಾತನಾಡಿ, ಕೃಷಿ ಇಲಾಖೆಯಿಂದ ದೊರಕಬಹುದಾದ ಸೌಲಭ್ಯಗಳಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಗಳು ಹಾಗೂ ಯಂತ್ರಶ್ರೀ ನಾಟಿಯಿಂದಾಗುವ ಪ್ರಯೋಜನದ ಮಾಹಿತಿ ನೀಡಿದರು.
ಕೃಷಿ ಇಲಾಖೆಯಿಂದ ಯಂತ್ರಶ್ರೀ ನಾಟಿ ಮಾಡುವ ರೈತರಿಗೆ ಬಿತ್ತನೆ ಬೀಜವನ್ನು ಉಚಿತವಾಗಿ ನೀಡಲಾಯಿತು. ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ್, ಗ್ರಾಪಂ ಮಾಜಿ ಸದಸ್ಯ ಶಂಕರ್, ಸಿಎಚ್‌ಎಸ್‌ಸಿ ಅಭಿಯಂತರ ಅವಿನಾಶ್, ಮಂಜುನಾಥ್, ಪ್ರಗತಿಪರ ಕೃಷಿಕ ಶೇಷನಗೌಡ, ಅನೂಪ್‌ಕುಮಾರ್, ರವಿ, 30ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.