ಕಡೂರಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಎಸ್.ವಿಜಯ್ ಕುಮಾರ್ ಇಒ ಸಿ.ಆರ್.ಪ್ರವೀಣ್ಗೆ ಮನವಿ ಸಲ್ಲಿಸಿದರು. 
ಚಿಕ್ಕಮಗಳೂರು

ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಸಮಸ್ಯೆಗಳಿಗೆ ಪರಿಹಾರ

ಜಿ.ಹೆಚ್. ಧನ್ಯಕುಮಾರ್
ಕಡೂರು: ಗ್ರಾಪಂ, ನೌಕರರು ಪಿಡಿಒ ಜತೆಗೆ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಇಒ ಸಿ.ಆರ್.ಪ್ರವೀಣ್ ಹೇಳಿದರು.
ತಾಪಂ ಆವರಣದಲ್ಲಿ ನಡೆದ ಗ್ರಾಪಂ ನೌಕರರ ಫೆಡರೇಷನ್ ಜಿಲ್ಲಾ ಸಮಾವೇಶದಲ್ಲಿ ನೌಕರರ ಮನವಿ ಸ್ವೀಕರಿಸಿ ಮಾತನಾಡಿ, ಸ್ಥಳೀಯ ಗ್ರಾಪಂಗಳಲ್ಲಿನ ನೌಕರರಲ್ಲಿ ಬಹಳಷ್ಟು ನೀರುಗಂಟಿಗಳು ನಿರ್ಲಕ್ಷ್ಯಕ್ಕೊಳಗಾಗಿದ್ದರೆ ಎಂಬ ಮಾತುಗಳಿವೆ. ಕನಿಷ್ಠ ವೇತನದಡಿ ಈ ನೌಕರರನ್ನು ತಂದಿರುವುದರಿಂದ ಸರ್ಕಾರದಿಂದ ಅನುಮೋದನೆಯಾಗಿರುವ ಸಿಬ್ಬಂದಿಗೆ ನೇರವಾಗಿ ಬ್ಯಾಂಕ್ ಖಾತೆಗೆ ವೇತನದ ಹಣ ಜಮಾ ಆಗುತ್ತದೆ. ನೌಕರರನ್ನು ಕೆಲಸದಿಂದ ತೆಗೆದುಹಾಕುವಂತಿಲ್ಲ. ಇದಕ್ಕಾಗಿ ಒಂದಿಷ್ಟು ನಿಯಮಗಳಿವೆ. ಅವುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಲಾಗುವುದು ಎಂದರು.
ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯಲ್ಲಿ ನೀರು ಗಂಟಿಗಳ ಪಾತ್ರ ದೊಡ್ಡದು. ಬರಗಾಲದ ಪ್ರದೇಶವಾದ ಕಡೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿದೆ. ತೊಂದರೆಯಾಗದಂತೆ ನೀರು ಸರಬರಾಜು ಮಾಡಲು ಗ್ರಾಪಂ ನೌಕರರು ಗಮನ ಹರಿಸಬೇಕು. ಈಗಾಗಲೇ ಗ್ರಾಪಂ ನೌಕರರು ಹಾಗೂ ಅವರ ಅವಲಂಬಿತರನ್ನು ಆರೋಗ್ಯ ವಿಮೆ ಯೋಜನೆಯಡಿ ತರಲಾಗಿದೆ. ಸಿಬ್ಬಂದಿಗೆ ನಿವೃತ್ತಿ ವೇತನ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ ಎಂದರು.
ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್ ಕುಮಾರ್ ಮಾತನಾಡಿ, ಗ್ರಾಪಂ ನೌಕರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಆದರೆ ಗ್ರಾಪಂ ನೌಕರರ ಮೇಲೆ ಹಲ್ಲೆ ಮಾಡಿ ನಿಕೃಷ್ಟವಾಗಿ ನಡೆಸಿಕೊಳ್ಳುವ ಬಹಳಷ್ಟು ಪ್ರಕರಣಗಳು ನಡೆದಿವೆ. ಆಂತಹ ಸಮಯದಲ್ಲಿ ಪಿಡಿಒಗಳು ನೌಕರರ ಪರವಾಗಿ ಸ್ವಯಂದೂರು ಸಲ್ಲಿಸಬೇಕು. ಫೆಡರೇಷನ್ ಮೂಲಕ ಅಂತಹ ಪ್ರಕರಣಗಳಲ್ಲಿ ನೌಕರರ ಪರವಾಗಿ ಧ್ವನಿ ಎತ್ತಲಾಗುವುದು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಸಹಾಯಕ ನಿರ್ದೇಶಕ ಎ.ಇ.ಕಲ್ಲಪ್ಪ, ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಸಂಘಟನೆ ಕಾರ್ಯದರ್ಶಿ ರುದ್ರಾಂಭಿಕ, ತಾಲೂಕು ಗ್ರಾಪಂ ನೌಕರರ ಫೆಡರೇಷನ್ ಅಧ್ಯಕ್ಷ ಕೆ.ಉಮೇಶ್, ಉಪಾಧ್ಯಕ್ಷೆ ಮಂಜುಳಾ, ಪ್ರಧಾನ ಕಾರ್ಯದರ್ಶಿ ಕಲ್ಕರೆ ರಾಜಪ್ಪ, ಪದಾಧಿಕಾರಿಗಳಾದ
ಜಿ.ಎಸ್.ಮಲ್ಲೇಶಪ್ಪ, ಎಸ್.ಶಂಕರಪ್ಪ, ಕೆ.ಎಸ್.ಮಲ್ಲಪ್ಪ, ಬಸವರಾಜಪ್ಪ, ಧರಣೇಶ್, ಕೆ.ರಂಗಪ್ಪ, ಸಿ.ಎಚ್.ಮೋಹನ್ ಕುಮಾರ್, ಬಿ.ಮಂಜಪ್ಪ, ಶೈಲೇಂದ್ರ, ಎ.ಆರ್. ಮಹೇಶ್ವರಪ್ಪ ಮತ್ತಿತರಿದ್ದರು.