ಮೂಡಿಗೆರೆ ಸಂತ ಮಾರ್ಥಾಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಸಾರ್ವಜನಿಕರಿಗೆ ಪರಿಚಯ ಮಾಡಿಕೊಟ್ಟರು. 
ಚಿಕ್ಕಮಗಳೂರು

ವೈಜ್ಞಾನಿಕ ಚಿಂತನೆಯಿಂದ ಸಮಸ್ಯೆ ಪರಿಹಾರ

ಜಿ. ಗಜೇಂದ್ರ
ಮೂಡಿಗೆರೆ: ಏಷ್ಯಾದ ಮೊಟ್ಟ ಮೊದಲ ನೋಬೆಲ್ ಪ್ರಶಸ್ತಿ ಪುರಸ್ಕೃತ ಸಿ.ವಿ.ರಾಮನ್ ಅವರು 1928ರಲ್ಲಿ ಸಂಶೋಧಿಸಿದ ರಾಮನ್ ಎಫೆಕ್ಟ್ ನೆನಪಿಗಾಗಿ ಪ್ರತಿವರ್ಷ ಅಂತಾರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ ಎಂದು ನಿವೃತ್ತ ಶಿಕ್ಷಕಿ ಜೀಟಾ ಲೋಬೊ ಹೇಳಿದರು.
ಪಟ್ಟಣದ ಸಂತ ಮಾರ್ಥಾಸ್ ಶಾಲೆಯಲ್ಲಿ ಸೋಮವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ವಿಜ್ಞಾನದಿಂದ ಮಾತ್ರ ಸಾಧ್ಯ. ವಿಜ್ಞಾನ ಆವಿಷ್ಕಾರದ ಮೂಲಕ ಏಕೆ, ಏನು, ಹೇಗೆ ಎಂಬ ಪ್ರಶ್ನೆ ಮಾಡುವುದರೊಂದಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬಹುದು ಎಂದರು.
ಶಾಲೆಗಳಲ್ಲಿ ವಿಜ್ಞಾನ ಪ್ರದರ್ಶನ ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಸಾಧ್ಯ. ವಿದ್ಯಾರ್ಥಿಗಳು ಹೊಸ ಆವಿಷ್ಕಾರದೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಮೂಢನಂಬಿಕೆಗಳನ್ನು ದೂರಮಾಡಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಹೊರತರುವಲ್ಲಿ ವಿಜ್ಞಾನ ಮೇಳಗಳು ಸಹಕಾರಿ ಎಂದು ತಿಳಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಮೋಲಿ, ಸುನಿಲ್ ಕುಮಾರ್, ಸುಶೀಲಾ ಡಿಸೋಜ, ಮಂಜುನಾಥ್ ಇತರರಿದ್ದರು.