ರಸ್ತೆಯಲ್ಲಿ ಕೆಟ್ಟು ನಿಂತಿರುವ ಬಸ್.
ಕಳಸ: ಶ್ರೀ ಕ್ಷೇತ್ರ ಹೊರನಾಡಿಗೆ ಸಂಪರ್ಕ ಕಲ್ಪಿಸುವ, ಪ್ರತಿನಿತ್ಯ ನೂರಾರು ಪ್ರವಾಸಿ ವಾಹನಗಳು, ಶಾಲಾ ಮಕ್ಕಳು, ಸಾರ್ವಜನಿಕರು ಓಡಾಡುವ ಮುಖ್ಯರಸ್ತೆಯಲ್ಲಿ ಐದು ತಿಂಗಳಿನಿಂದ ಕೆಟ್ಟು ನಿಂತಿರುವ ಖಾಸಗಿ ಬಸ್ ಈಗ ಕುಡುಕರು ಹಾಗೂ ಅನೈತಿಕ ಚಟುವಟಿಕೆಯ ಕೇಂದ್ರವಾಗಿ ಬದಲಾಗಿದೆ.
ಐದು ತಿಂಗಳ ಹಿಂದೆ ತಾಂತ್ರಿಕ ದೋಷದಿಂದ ಖಾಸಗಿ ಬಸ್ ಕಳಸ-ಹೊರನಾಡು ರಸ್ತೆಯ ಕೆಪಿಎಸ್ ಪ್ರೌಢಶಾಲೆ ಹತ್ತಿರ ಕೆಟ್ಟು ನಿಂತಿತ್ತು. ರಸ್ತೆಯಿಂದ ವಾಹನವನ್ನು ತಕ್ಷಣ ತೆರವುಗೊಳಿಸುವುದು ಮಾಲೀಕನ ಕರ್ತವ್ಯವಾಗಿತ್ತು. ಆದರೆ ಐದು ತಿಂಗಳು ಕಳೆದರೂ ಬಸ್ ಜಾಗದಿಂದ ಕದಲಿಲ್ಲ. ಇದರಿಂದ ಹೊರನಾಡಿಗೆ ಹೋಗಿ ಬರುವ ವಾಹನ ಸಂಚಾರಕ್ಕೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಇತ್ತೀಚಿನ ಮಳೆಗೆ ಹರಿದು ಬಂದ ನೀರು ಬಸ್‌ಗೆ ಅಡ್ಡಲಾಗಿ ನಿಂತು, ಅದರೊಂದಿಗೆ ಕೊಚ್ಚಿ ಬಂದ ಕಸ ಕಡ್ಡಿ, ಮಣ್ಣು ರಸ್ತೆಯಲ್ಲಿ ಶೇಖರಣೆಯಾಗಿದೆ. ಇದರಿಂದ ರಸ್ತೆಯ ಒಂದು ಭಾಗ ಸಂಪೂರ್ಣ ಮಣ್ಣಿನ ರಾಶಿಯಿಂದ ಮುಚ್ಚಿಹೋಗಿದ್ದು, ದ್ವಿಚಕ್ರ ವಾಹನ ಸವಾರರು ಜಾರಿಬೀಳುವ ಭೀತಿ ಉಂಟಾಗಿದೆ.
ಬಸ್ ನಿಂತಿರುವುದು ಕೆಪಿಎಸ್ ಪ್ರೌಢಶಾಲೆ ಸಮೀಪದಲ್ಲಿ. ನೂರಾರು ವಿದ್ಯಾರ್ಥಿಗಳು ಇದೇ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಸಂಜೆಯಾಗುತ್ತಿದ್ದಂತೆ ಈ ಪ್ರದೇಶದಲ್ಲಿ ಜನಸಂಚಾರ ವಿರಳವಾಗುವುದನ್ನು ಕಾಯುವ ಪುಂಡರು ಬಸ್‌ನ ಒಳಗಡೆ ಕುಳಿತು ಮದ್ಯ ಸೇವಿಸಲು ಆರಂಭಿಸುತ್ತಾರೆ. ಬಸ್‌ನ ಸೀಟುಗಳ ಮೇಲೆ ಮತ್ತು ನೆಲದ ಮೇಲೆ ಬಿದ್ದಿರುವ ಮದ್ಯದ ಖಾಲಿ ಪ್ಯಾಕೆಟ್‌ಗಳು, ವಾಟರ್‌ಬಾಟಲಿಗಳು ಇದಕ್ಕೆ ಸಾಕ್ಷಿ.
ಸಂಜೆ ಅತ್ಯಂತ ವಿರಳವಾಗಿ ಓಡಾಡುವ ಪ್ರದೇಶ ಇದು. ಕುಡುಕರು ಮಾತ್ರವಲ್ಲ, ಅನೈತಿಕ ಚಟುವಟಿಕೆಯ ತಾಣವೂ ಆಗಿದೆ. ಜನರಿಲ್ಲದ ಸಮಯ ಸಾಧಿಸಿ ಕೆಲವು ಜೋಡಿಗಳು ಈ ಬಸ್‌ನ ಒಳಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅವರಿಗೆ ಬೆದರಿಸಿ ಕಳುಹಿಸಿದ್ದಾರೆ. ಬಸ್ ನಿಲ್ಲಿಸಿದ್ದಕ್ಕೆ ಕಳಸ ಪೊಲೀಸರು ಮತ್ತು ಕಳಸ ಪಿಡಿಒ ಬಸ್‌ನ ಮಾಲೀಕನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಆಗ ಮಾಲೀಕ ಒಂದು ವಾರದೊಳಗೆ ಬಸ್ ತೆರವು ಮಾಡುವುದಾಗಿ ತಿಳಿಸಿದ್ದರು. ಆದರೆ ಆ ಮಾತು ಕೊಟ್ಟು ಎರಡು ತಿಂಗಳು ಕಳೆದರೂ ಬಸ್ ಮಾತ್ರ ಇನ್ನೂ ತೆರವುಮಾಡಿಲ್ಲ.