ಚಿಕ್ಕಮಗಳೂರು: ಧಾರ್ಮಿಕ ಕಾರ್ಯಕ್ರಮಗಳನ್ನು ಅಡೆತಡೆಗಳ ನಡುವೆಯೂ 75 ವರ್ಷ ನಿರಂತರವಾಗಿ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುವುದು ಮಹತ್ತರ ಸಾಧನೆ ಎಂದು ಬಸವತತ್ವಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಬೀಕನಹಳ್ಳಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ ಆಯೋಜಿಸಿರುವ 75ನೇ ವರ್ಷದ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮರಿಯಪ್ಪನವರ ನೇತೃತ್ವದಲ್ಲಿ ಆರಂಭವಾದ ಚಾಮುಂಡೇಶ್ವರಿ ಸುಕ್ಷೇತ್ರದ ದಸರಾ ಮಹೋತ್ಸವ 75 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ. ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಿಯ ವಾತಾವರಣ ಜೀವಂತವಾಗಿರಿಸುವ ಜತೆಗೆ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಕ್ಷೇತ್ರದ ಆಡಳಿತ ಮಂಡಳಿ ಮಾಡುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವದ ಮೆರವಣಿಗೆಗಳಲ್ಲಿ ಡಿಜೆ ಬಳಕೆ ಹಾಗೂ ಕೆಲವು ಹಾಡುಗಳ ಸಾಹಿತ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ವಾಮೀಜಿ, ಧಾರ್ಮಿಕ ಆಚರಣೆಗಳು ಸಭ್ಯತೆ ಎಲ್ಲೆ ಮೀರಬಾರದು. ದೇವರ ಹೆಸರಿನಲ್ಲಿ ನಡೆಯುವ ಉತ್ಸವಗಳು ಭಕ್ತಿ, ಶ್ರದ್ಧೆ ಮತ್ತು ಉತ್ತಮ ಸಂಸ್ಕಾರ ಬೆಳೆಸುವಂತಿರಬೇಕು. ಆದರೆ ಕೆಲವು ಮೆರವಣಿಗೆಗಳಲ್ಲಿ ಅತಿಯಾದ ಶಬ್ದ, ಅಸಭ್ಯ ಸಾಹಿತ್ಯ ಹಾಗೂ ಅಸಂಸ್ಕೃತ ನೃತ್ಯಗಳು ಕಂಡುಬರುತ್ತಿರುವುದು ವಿಷಾದನೀಯ. ದೇವರ ಆರಾಧನೆ ಸಂದರ್ಭದಲ್ಲಿ ನಾವು ಯಾವ ರೀತಿ ವರ್ತನೆ ತೋರುತ್ತಿದ್ದೇವೆ ಎಂಬ ಆತ್ಮಾವಲೋಕನ ಅಗತ್ಯ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಮೈಸೂರು ದಸರಾ ಮಾದರಿಯಲ್ಲಿ ಚಿಕ್ಕಮಗಳೂರಿನ ಬೀಕನಹಳ್ಳಿ ಗ್ರಾಮದ ಚಾಮುಂಡೇಶ್ವರಿ ಸುಕ್ಷೇತ್ರದಲ್ಲಿ ದಸರಾ ಮಹೋತ್ಸವ ನಡೆಯುತ್ತಿರುವುದು ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿ. ಕ್ಷೇತ್ರದ ಆಡಳಿತ ಮಂಡಳಿಯ ಶಿಸ್ತುಬದ್ಧ ನಿರ್ವಹಣೆ, ದಾನಿಗಳ ನೆರವು ಹಾಗೂ ಗ್ರಾಮಸ್ಥರ ಸಹಕಾರದಿಂದ ಉತ್ಸವ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ ಎಂದು ಹೇಳಿದರು.
75ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ, ಹೋಮ-ಹವನ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಯುಧ ಪೂಜೆ ಹಾಗೂ ವಿಜಯದಶಮಿಯಂದು ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ವಿಜಯ ದಶಮಿಯಂದು ಅಂಬು ಕಡಿಯುವ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ದೇವರ ಮೇಲಿನ ಭಕ್ತಿ, ಗುರುಗಳ ಆಶೀರ್ವಾದ ಹಾಗೂ ಹಿರಿಯರ ಮಾರ್ಗದರ್ಶನದಿಂದ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ಎಲ್ಲರೂ ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶ್ರೀಚಾಮುಂಡೇಶ್ವರಿ ಸುಕ್ಷೇತ್ರದ ಅಧ್ಯಕ್ಷ ಪಿ.ಪಿ.ನಂಜಪ್ಪ, ಉಪಾಧ್ಯಕ್ಷ ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ ಯೋಗಾನಂದ್, ಖಜಾಂಚಿ ಬಿ.ಎಚ್.ಸೋಮೇಗೌಡ, ಸದಸ್ಯರಾದ ಬಿ.ಎಚ್ ನಂಜುಂಡಪ್ಪ, ಬಿ.ಸಿ.ಗುರುಸಿದ್ದಪ್ಪ, ಬಿ.ವಿ.ಯತಿರಾಜ್, ಎಂ.ಲೋಕನಾಥ್, ರಂಗಪ್ಪ, ಬಿ.ಎಂ.ನಾಗರಾಜ್, ಬಿ.ಎಸ್.ಪರಮೇಶ್ವರಪ್ಪ, ವಿಜಯಕುಮಾರ್, ಚಂದ್ರಚಾರ್, ಮಲ್ಲಿಕಾರ್ಜುನ್, ಬಿ.ಎನ್.ನಾಗಭೂಷಣ, ಲಲಿತ ಬಸವರಾಜಪ್ಪ ಇದ್ದರು.
ಸಮಾಜದ ಭವಿಷ್ಯವಾಗಿರುವ ಯುವಕರು ಉತ್ತಮ ಸಂಸ್ಕಾರ, ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳತ್ತ ಆಕರ್ಷಿತರಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ಧಾರ್ಮಿಕ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿ ಅರಿವು ಮೂಡಿಸಬೇಕು. ಕೇವಲ ಮನರಂಜನೆಗೆ ಸೀಮಿತವಾಗದೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳಲ್ಲಿ ಯುವಕರು ಭಾಗವಹಿಸುವಂತಾಗಬೇಕು ಎಂದು ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು. ಸಿನಿಮಾಗಳಲ್ಲಿ ಹಿಂಸೆ ಮತ್ತು ಅಶ್ಲೀಲತೆಯ ವೈಭವೀಕರಣ ಸಲ್ಲದು. ಸಮಾಜದಲ್ಲಿ ಉತ್ತಮ ಅಭಿರುಚಿ ಬೆಳೆಸುವ ಉದ್ದೇಶದಿಂದ ಸದಭಿರುಚಿಯ ಚಲನಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವ ಪರಂಪರೆಯ ಹಿಂದೆ ರಾಷ್ಟ್ರಪ್ರಜ್ಞೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಆಶಯವಿತ್ತು. ಆದರೆ ಇಂದಿನ ಕೆಲವು ಆಚರಣೆಗಳಲ್ಲಿ ಆ ಮೂಲ ಉದ್ದೇಶ ಮರೆಯಾಗುತ್ತಿರುವುದು ಆತಂಕಕಾರಿ. ಯುವಕರು ಧಾರ್ಮಿಕ ಆಚರಣೆಗಳ ಮಹತ್ವ ಅರಿತು,ಅವುಗಳ ಗೌರವ ಕಾಪಾಡಬೇಕು.ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ