ಕಳಸ: ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಜೊತೆಗೆ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯೂ ಹೆಚ್ಚುತ್ತಿದ್ದು, ಪ್ರವಾಸೋದ್ಯಮದ ಅಭಿವೃದ್ಧಿ ಜತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು ಅನಿವಾರ್ಯ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆ ಪಿಂಟೋ ಹೇಳಿದರು.
ಕಳಸದಲ್ಲಿ ಸೋಮವಾರ ಆಯೋಜಿಸಿದ್ದ ಪ್ರವಾಸೋದ್ಯಮ ದಿನಾಚರಣೆ ಹಾಗೂ ಕಳಸ ಟೂರಿಸಂ ೆರಂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ವಿದೇಶಗಳಿಗೆ ತೆರಳಿದಾಗ ಅಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಾವು, ನಮ್ಮದೇ ದೇಶದಲ್ಲಿ ಅದೇ ಜವಾಬ್ದಾರಿಯನ್ನು ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.ಪ್ರವಾಸೋದ್ಯಮದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ. ಆದರೆ ಪ್ರವಾಸಿಗರನ್ನು ಸ್ವಾಗತಿಸುವ ನೆಪದಲ್ಲಿ ನಮ್ಮ ಪರಿಸರ ಕಳೆದುಕೊಳ್ಳಬಾರದು. ಪ್ರವಾಸೋದ್ಯಮದೊಂದಿಗೆ ಪರಿಸರ ಸಂರಕ್ಷಣೆಯೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಟ್ರಕಿಂಗ್‌ಗೆ ಗೈಡ್‌ಗಳಿಗೆ ಅನುಮತಿ ಪತ್ರ ಕಡ್ಡಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಕಳಸದಲ್ಲಿಯೇ ಚಾರಣ ಮಾರ್ಗದರ್ಶಿಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು. ಸ್ಥಳೀಯ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮೂಲ ಸೌಕರ್ಯದ ಕೊರತೆಯಿಂದ ಬಳಲುತ್ತಿರುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅಗತ್ಯ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.
ಕಳಸ ಟೂರಿಸಂ ೆರಂ ಸದಸ್ಯ ರವಿ ಕೆಳಂಗಡಿ ಮಾತನಾಡಿ, ೆರಂ ಮೂಲಕ ಕಳಸದಲ್ಲಿ ಜವಾಬ್ದಾರಿಯುತ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ಕಳಸದಲ್ಲಿ ಸರ್ಕಾರದಿಂದ ಪ್ರವಾಸಿ ಮಾಹಿತಿ ಕೇಂದ್ರ ಸ್ಥಾಪಿಸಬೇಕು. ಹೋಂ ಸ್ಟೇಗಳ ನೋಂದಣಿ ಪ್ರಕ್ರಿಯೆ ಸರಳಗೊಳಿಸಬೇಕು. ಪ್ರವಾಸಿ ತಾಣಗಳಲ್ಲಿ ಮಹಿಳೆಯರಿಗೆ ಅಗತ್ಯ ವಾಶ್‌ರೂಂ ವ್ಯವಸ್ಥೆ ಕಲ್ಪಿಸಬೇಕು. ಸೂಜಿ ಗುಡ್ಡ ಹಾಗೂ ಕಾರ್ಲೆ ಗುಡ್ಡಗಳಿಗೆ ವ್ಯವಸ್ಥಿತ ಟ್ರೆಕ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಹೋಂ ಸ್ಟೇ ಮಾಲೀಕರ ಸಂಘದ ಅಧ್ಯಕ್ಷ ತೇಜಸ್ವಿ ಮಾತನಾಡಿ, ಕಳಸ ಚಿಕ್ಕಮಗಳೂರು ಜಿಲ್ಲೆಯ ಕಿರೀಟ. ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ ಪರಿಸರ ರಕ್ಷಣೆಯೂ ನಡೆಯಬೇಕು. ಕಳಸವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಟೂರಿಸಂ ೆರಂ ಅಧ್ಯಕ್ಷ ಸತೀಶ್ ಜೈನ್ ಮಾತನಾಡಿ, ಇಕೋ ಟೂರಿಸಂ ಇಲಾಖೆಯಲ್ಲಿ ಈ ಹಿಂದೆ ಭ್ರಷ್ಟಾಚಾರ ನಡೆದಿದೆ. ಆದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ. ಚಾರಣ ಟಿಕೆಟ್ ನೀಡಿಕೆಯಲ್ಲಿಯೂ ಅಕ್ರಮಗಳು ನಡೆದಿದ್ದು, ಸಿಬ್ಬಂದಿ ಕುಮ್ಮಕ್ಕಿನಿಂದ ಟಿಕೆಟ್ ಪಡೆಯದೆ ಅಕ್ರಮವಾಗಿ ಚಾರಣ ನಡೆಸುವ ಘಟನೆಗಳು ನಡೆಯುತ್ತಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಪಾರದರ್ಶಕ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರವಾಸೋದ್ಯಮ ದಿನಾಚರಣೆಗೆ ಮುನ್ನ ಕಳಸದ ನೆಲ್ಲಿಕೆರೆಯಿಂದ ಅರಮನೆಮಕ್ಕಿವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ನೂರಾರು ವಾಹನಗಳು ಜಾಥಾದಲ್ಲಿ ಪಾಲ್ಗೊಂಡು ಪ್ರವಾಸೋದ್ಯಮದ ಮಹತ್ವವನ್ನು ಸಾರಿದವು. ಕಳಸ ತಾಲೂಕಿನ ವಿವಿಧ ಪ್ರವಾಸಿ ತಾಣಗಳ ಬೃಹತ್ ಕಟೌಟ್‌ಗಳನ್ನು ವಾಹನಗಳಲ್ಲಿ ಅಳವಡಿಸಿ ಸಾರ್ವಜನಿಕರಿಗೆ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡಲಾಯಿತು. ಜಾಥಾದಲ್ಲಿ ಕರಡಿ ಕುಣಿತ, ಕೊಂಬು ಕಹಳೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ವಿಶೇಷ ಮೆರುಗು ನೀಡಿದವು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪೃಥ್ವಿಜಿತ್, ಮುಖಂಡರಾದ ಕೆ.ಆರ್.ಪ್ರಭಾಕರ್, ಕೆ.ಕೆ.ಬಾಲಕೃಷ್ಣ ಭಟ್, ಪ್ರಸನ್ನ, ತಹಸೀಲ್ದಾರ್ ಮಂಜುನಾಥ್, ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ್, ಅಜಿತ್‌ಭಟ್ ಸುಳ್ಯ ಮತ್ತಿತರರು ಇದ್ದರು.
ಭದ್ರಾ ನದಿಯ ಪರಿಶುದ್ಧ ನೀರು, ಹಸಿರು ಪರಿಸರ ಹಾಗೂ ಇಲ್ಲಿನ ವಿಶಿಷ್ಟ, ಸಂಸ್ಕೃತಿ ಪ್ರವಾಸಿಗರನ್ನು ಕಳಸದತ್ತ ಆಕರ್ಷಿಸುತ್ತಿವೆ. ಪರಿಸರಕ್ಕೆ ಪೂರಕವಾಗಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವ ಮೂಲಕ ಸ್ವಚ್ಛ ಹಸಿರು ಕಳಸವನ್ನು ಉಳಿಸಿಕೊಳ್ಳಬೇಕುಗೌರವ್ ವಲಯ ಅರಣ್ಯಾಧಿಕಾರಿ