ಎನ್.ಆರ್.ಪುರ ತಾಪಂ ಸಾಮರ್ಥ್ಯಸೌಧದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು. ಚಂದ್ರಮ್ಮ, ಎಚ್.ಡಿ.ನವೀನ್‌ಕುಮಾರ್, ಇಂದಿರಾನಗರ ರಘು, ನಿತ್ಯಾನಂದ, ಅಪೂರ್ವ, ಹೂವಮ್ಮ ಇತರರಿದ್ದರು.
ಎನ್.ಆರ್.ಪುರ: ಪಟ್ಟಣದಲ್ಲಿ ಸರ್ಕಾರಿ ಐಟಿಐ ಕಾಲೇಜಿನ ಪ್ರವೇಶಾತಿ ಆರಂಭದ ಹಿನ್ನೆಲೆಯಲ್ಲಿ ಪಟ್ಟಣದ ಪಪಂ ಮುಂಭಾಗದ ಬಸ್ ತಂಗುದಾಣದ ಸಮೀಪ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಡಿಸಿಎಂ ಅಶ್ವಥನಾರಾಯಣ ಅವರ ಭಾವಚಿತ್ರವಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರವೇಶಾತಿ ಪ್ರಾರಂಭದ ಜಾಹೀರಾತಿನ ಬ್ಯಾನರ್ ಹಾಕಿದ್ದ ಕಾಲೇಜಿನ ಪ್ರಾಚಾರ್ಯರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಸೋಮವಾರ ತರಾಟೆಗೆ ತೆಗೆದುಕೊಂಡರು.
ತಾಪಂ ಸಾಮರ್ಥ್ಯಸೌಧದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯರು ಕಳೆದ ನಾಲ್ಕೈದು ದಿನಗಳ ಹಿಂದೆ ಪಟ್ಟಣದಲ್ಲಿ ಮಾಜಿ ಸಿಎಂ ಹಾಗೂ ಮಾಜಿ ಡಿಸಿಎಂ ಭಾವಚಿತ್ರವಿರುವ ಬ್ಯಾನರ್ ಹಾಕಿರುವ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್‌ಖಾನ್ ಅವರನ್ನು ಪ್ರಶ್ನಿಸಿದರು. ಈ ಬಗ್ಗೆ ನನಗೆ ಯಾವುದೇ ಮಾಹಿತಿ, ದೂರಾಗಲಿ ಬಂದಿಲ್ಲ ಎಂದು ಉದ್ಯೋಗಾಧಿಕಾರಿ ತಿಳಿಸಿದರು. ಸಮಿತಿ ಸದಸ್ಯ ಇಂದಿರಾನಗರ ರಘು ಸಂಬಂಧಪಟ್ಟ ಕಾಲೇಜಿನ ಪ್ರಾಚಾರ್ಯರನ್ನು ಸಭೆಗೆ ಕರೆಸುವಂತೆ ಪಟ್ಟು ಹಿಡಿದರು. ತಕ್ಷಣವೇ ಸಭೆಗೆ ಬರುವಂತೆ ಜಿಲ್ಲಾ ಉದ್ಯೋಗಾಧಿಕಾರಿ ದೂರವಾಣಿ ಕರೆ ಮಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಮಂಜುನಾಥ್ ಅವರನ್ನು ಕರೆಸಿದರು.
ಸಂಸ್ಥೆ ಪ್ರಾಚಾರ್ಯ ಮಂಜುನಾಥ್ ಮಾತನಾಡಿ, ನಾನು ಈ ಸಂಸ್ಥೆಗೆ ಬಂದು 5 ತಿಂಗಳಾಗಿದೆ. ಸಂಸ್ಥೆಯ ಕೆಲವು ಸಿಬ್ಬಂದಿಯನ್ನು ಸೆನ್ಸಸ್ ಕರ್ತವ್ಯಕ್ಕೆ ತೆಗೆದುಕೊಳ್ಳಲಾಗಿದೆ. ಪ್ರವೇಶಾತಿ ಪ್ರಾರಂಭದ ಬ್ಯಾನರ್ ಅಳವಡಿಸಲು ಅತಿಥಿ ಶಿಕ್ಷಕರಿಗೆ ಜವಾಬ್ದಾರಿ ವಹಿಸಿದ್ದೆ. ಅವರು ಹೊಸ ಬ್ಯಾನರ್ ಜತೆಯಲ್ಲಿ ಒಂದು ಹಳೆಯ ಬ್ಯಾನರ್‌ನ್ನು ಕೊಟ್ಟು ಬ್ಯಾನರ್ ಅಳವಡಿಸಲು ಕಳುಹಿಸಿದ್ದು ಕಣ್ತಪ್ಪಿನಿಂದಾಗಿ ಈ ರೀತಿ ತಪ್ಪಾಗಿದೆ ಎಂದರು.
ಇದಕ್ಕೆ ಸುಮ್ಮನಾಗದ ಸದಸ್ಯರು ಈ ಉತ್ತರ ಸಮಂಜಸವಲ್ಲ. ನೀವು ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಮೂರು ವರ್ಷದಿಂದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಈಗಿನ ಮುಖ್ಯಮಂತ್ರಿಯಾರೆಂದು ತಿಳಿದಿಲ್ಲವೇ, ಬ್ಯಾನರ್ ಅಳವಡಿಸುವಾಗಲೇ ಭಾವಚಿತ್ರ ನೋಡಿರಲಿಲ್ಲವೇ ಎಂದು ರೇಗಿದರು.
ಇಂದಿರಾನಗರ ರಘು ಪ್ರಾಚಾರ್ಯರ ಮೇಲೆ ಏನು ಕ್ರಮಕೈಗೊಳ್ಳುತ್ತೀರಾ ಎಂದು ಜಿಲ್ಲಾ ಉದೋಗಾಧಿಕಾರಿಗೆ ಪ್ರಶ್ನಿಸಿದರು. ಇಲ್ಲವಾದಲ್ಲಿ ಬ್ಯಾನರ್ ಅಳವಡಿಸಲು ಜವಾಬ್ದಾರಿ ತೆಗೆದುಕೊಂಡ ಅತಿಥಿ ಶಿಕ್ಷಕರ ಮೇಲೆ ಕ್ರಮವಾಗಬೇಕೆಂದು ಸರ್ವ ಸದಸ್ಯರು ಪಟ್ಟು ಹಿಡಿದರು.
ಪ್ರಾಚಾರ್ಯ ಮಂಜುನಾಥ್ ಮಾತನಾಡಿ, ಮಾಜಿ ಸಿಎಂ, ಮಾಜಿ ಡಿಸಿಎಂ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿದ್ದು ತಪ್ಪು. ಸಂಬಂಧಪಟ್ಟ ಅತಿಥಿ ಶಿಕ್ಷಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಬ್ಯಾನರ್ ಅಳವಡಿಸಿದ ದಿನದ ರಾತ್ರಿಯೇ ಬ್ಯಾನರ್‌ನ್ನು ತೆರವುಗೊಳಿಸಲಾಗಿದೆ. ಇನ್ನು ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಲಾಗುವುದೆಂದು ಸಭೆಯಲ್ಲಿ ಕ್ಷಮೆ ಕೋರಿ ಚರ್ಚೆಗೆ ತೆರೆ ಎಳೆದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಅಪೂರ್ವ, ಹೂವಮ್ಮ, ಸೈಯದ್ ಶಫೀರ್‌ಅಹಮ್ಮದ್, ಬೇಸಿಲ್,ದೇವರಾಜ್, ನಾಗರಾಜ್ ಇತರರಿದ್ದರು.