ಕಡೂರು ತಾಲೂಕಿನ ಯಗಟಿಯಲ್ಲಿ ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ನಡೆಯಿತು. ಪೂರ್ಣಿಮಾ ಸಿ.ಆರ್.ಪ್ರವೀಣ್, ಜ್ಯೋತಿ, ಪೊಲೀಸರು ಇದ್ದರು.  
ಚಿಕ್ಕಮಗಳೂರು

ಮದ್ಯ ಅಕ್ರಮ ಮಾರಾಟ ತಡೆಯಿರಿ

ಕಡೂರು: ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರ ವಿರುದ್ಧ ಮಹಿಳೆಯರು ದೂರುತ್ತಿದ್ದಾರೆ. ಇದನ್ನು ಕೂಡಲೇ ನಿಯಂತ್ರಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಮಂಗಳವಾರ ಯಗಟಿ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಮಾತನಾಡಿ, ಯಗಟಿಯಲ್ಲಿ ಅಧಿಕೃತ ಮದ್ಯದಂಗಡಿಯಿದೆ. ಆದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮದ ಯುವಕರು ಮತ್ತು ಮಕ್ಕಳು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಶಾಲೆ, ಕಾಲೇಜುಗಳ ಆವರಣದಲ್ಲಿ ಸಂಜೆಯಾಗುತ್ತಲೇ ಮದ್ಯವ್ಯಸನಿಗಳು ಸೇರಿಕೊಂಡು ಮದ್ಯಪಾನ ಮಾಡುತ್ತಾರೆ. ಕುಡಿದ ನಂತರ ಬಾಟಲಿಗಳನ್ನು ಅಲ್ಲಿಯೇ ಒಡೆದು ಹಾಕುತ್ತಾರೆ. ಇದಕ್ಕೆಲ್ಲ ಕಡಿವಾಣ ಬೀಳಬೇಕಿದೆ. ಸಮಯ ಮೀರಿ ಅಂಗಡಿಯನ್ನು ತೆರೆಯದಂತೆ ಮದ್ಯದಗಂಡಿ ಮಾಲೀಕರಿಗೆ ಸೂಚಿಸಿ ಎಂದು ಶಾಸಕ ಕೆ.ಎಸ್.ಆನಂದ್ ಅವರಿಗೆ ಮನವಿ ಮಾಡಿದರು.
ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಿ. ಸಮಯ ಮೀರಿ ಮದ್ಯದಂಗಡಿ ತೆರೆಯದಂತೆ ಎಚ್ಚರ ವಹಿಸಿ. ಮದ್ಯಪಾನ ಮಾಡಿ ತಡ ರಾತ್ರಿವರೆಗೆ ಓಡಾಡುವುದನ್ನು ನಿಯಂತ್ರಿಸಿ. ಅಬಕಾರಿ ಮತ್ತು ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಎರಡೂ ಇಲಾಖೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಸಕ ಎಚ್ಚರಿಕೆ ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವುದನ್ನು ನೋಡಿದರೆ ಯಗಟಿ ವ್ಯಾಪ್ತಿಯಲ್ಲಿ ವಸತಿ ಮತ್ತು ನಿವೇಶನರಹಿತರ ಸಂಖ್ಯೆ ಬಹಳಷ್ಟಿದೆ ಎಂಬುದು ಗೊತ್ತಾಗುತ್ತಿದೆ. ಎರಡು ಎಕರೆಯಷ್ಟು ಸರ್ಕಾರಿ ಜಮೀನಿದ್ದರೆ ಗುರುತಿಸಿ. ಅರ್ಜಿ ಸಲ್ಲಿಸಿರುವವರ ಹೆಸರು ವಸತಿರಹಿತರ ಪಟ್ಟಿಯಲ್ಲಿದೆಯೇ ಪರಿಶೀಲಿಸಿ. ಪಟ್ಟಿಯಲ್ಲಿ ಇಲ್ಲದಿದ್ದರೆ ಸೇರಿಸಿ. ಜನವರಿ ನಂತರ ಸರ್ಕಾರದಿಂದ ಮನೆಗಳು ಮಂಜೂರಾಗಲಿದ್ದು, ಹಂಚಿಕೆ ಮಾಡಲಾಗುತ್ತದೆ ಎಂದು ಶಾಸಕ ಹೇಳಿದರು.
ಯಗಟಿ ಕೆರೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರವಾಗಿದೆ. ಏರಿ ಭದ್ರತೆ ಬಗ್ಗೆ ವಿಜಿಎನ್‌ಎಲ್ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನೀಡುವಂತೆ ನಿರ್ದೇಶಿಸಿದರು.
ಯಗಟಿ ಮುದಿಯಪ್ಪ ಬಡಾವಣೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಮೂಲಸೌಕರ್ಯ ಕಲ್ಪಿಸುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಅವರಿಗೆ ಬೇಕಾದವರ ಮನೆ ಮುಂದೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗಿದೆ. ನಮ್ಮ ಮನೆಯ ಮುಂದಿನ ರಸ್ತೆ ತುಂಬ ಗುಂಡಿಗಳು ಬಿದ್ದಿದ್ದು ವೃದ್ಧರು ನಡೆದಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರು ಸ್ಥಳಕ್ಕೆ ಬರಬೇಕು ಎಂದು ಮುದಿಯಪ್ಪ ಬಡಾವಣೆ ನಿವಾಸಿಗಳು ಪಟ್ಟುಹಿಡಿದರು. ಇದಕ್ಕೆ ಉತ್ತರಿಸಿದ ಶಾಸಕ ಕೆ.ಎಸ್.ಆನಂದ್, ಸಭೆ ನಂತರ ಸ್ಥಳ ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಭಿವೃದ್ಧಿ ಕಾರ್ಯಗಳಿಗೆ ಒಮ್ಮೆಲೆ ಹಣ ಬರುವುದಿಲ್ಲ. ಹಂತಹಂತವಾಗಿ ಬರುತ್ತದೆ. ಬಂದ ಹಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸವನ್ನು ಗ್ರಾಮ ಪಂಚಾಯಿತಿಯಿಂದ ನಿರ್ವಹಿಸಲಾಗುತ್ತದೆ. ಇದರ ಹೊರತಾಗಿಯೂ ತಾರತಮ್ಯವಾಗಿದ್ದರೆ ಸರಿಪಡಿಸಲಾಗುತ್ತದೆ ಎಂದರು.
ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಗ್ರಾಪಂ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್, ಉಪಾಧ್ಯಕ್ಷ ವೈ.ಎಸ್.ಸುನೀಲ್, ಗ್ರಾಪಂ ಸದಸ್ಯರಾದ ಚನ್ನಪಿಳ್ಳೇ ಗೋವಿಂದಪ್ಪ, ವೈ.ಎಚ್.ಮೂರ್ತಿ, ಗಾಯತ್ರಿ ರವಿಕುಮಾರ್, ಶಂಕರ್‌ನಾಯ್ಕ, ಪಾರ್ವತಿಬಾಯಿ, ಸತೀಶ್, ಸಾಕಮ್ಮ, ಮಂಜುನಾಥ್, ಪಿಡಿಒ ನವೀನ್‌ಕುಮಾರ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.