ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಉದ್ಘಾಟಿಸಿದರು.
ಚಿಕ್ಕಮಗಳೂರು: ಅನಾಹುತ ಅಥವಾ ತೊಂದರೆ ಸಂಭವಿಸಿದ ನಂತರ ಪರಿತಪಿಸುವುದಕ್ಕಿಂತ, ಅದು ನಡೆಯದಂತೆ ಮೊದಲೇ ತಡೆಗಟ್ಟುವುದು ಅತ್ಯಂತ ಸೂಕ್ತ. ಈ ನಿಟ್ಟಿನಲ್ಲಿ ಮಾನವ ಕಳ್ಳಸಾಗಾಣಿಕೆ ತಡೆಗೆ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವಂತೆ ಮನುಷ್ಯರನ್ನೇ ಮಾರಾಟ ಮಾಡುವ ಅಮಾನವೀಯ ಸ್ಥಿತಿ ಇಂದು ನಿರ್ಮಾಣವಾಗಿದೆ. ಕೂಲಿ ಕೆಲಸದ ನೆಪದಲ್ಲಿ ಹಾಗೂ ಬಡತನದ ದುರ್ಲಾಭ ಪಡೆದು ಅಪ್ರಾಪ್ತರನ್ನು, ಯುವಕರನ್ನು ಬೇರೆಡೆಗೆ ಕಳುಹಿಸುವ ಘಟನೆಗಳು ನಡೆಯುತ್ತಿವೆ. ಅಂತಾರಾಷ್ಟಿö್ರÃಯ ಮಟ್ಟದಲ್ಲಂತೂ ಇದೊಂದು ದೊಡ್ಡ ದಂಧೆಯಾಗಿ ಬೆಳೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆಚ್ಚಿನ ಶಿಕ್ಷಣ ಪಡೆಯದ ಯುವಕರಿಗೆ ವಿದೇಶಗಳಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಕೊಡಿಸುವುದಾಗಿ ಆಮಿಷ ಒಡ್ಡಿ ವಂಚಿಸಲಾಗುತ್ತಿದೆ. ಥೈಲ್ಯಾಂಡ್, ಮ್ಯಾನ್ಮಾರ್ ಮುಂತಾದ ದೇಶಗಳಿಗೆ ಕರೆದೊಯ್ದು, ಮೊಬೈಲ್ ಕಸಿದುಕೊಂಡು, ವೀಸಾ-ಪಾಸ್‌ಪೋರ್ಟ್ ಇಲ್ಲದೆ ಅಕ್ರಮವಾಗಿ ಗಡಿ ದಾಟಿಸಿ ಬಲವಂತವಾಗಿ ಕೆಲಸಕ್ಕೆ ದೂಡಲಾಗುತ್ತಿದೆ. ಅಂತಹ ಜಾಲಕ್ಕೆ ಸಿಲುಕಿದಾಗ ವಿದೇಶಿ ಜೈಲು ಸೇರುವ ಅಥವಾ ಅಪರಾಧ ಕೃತ್ಯಗಳಿಗೆ ಬಲಿಯಾಗುವ ಅಪಾಯವಿರುತ್ತದೆ. ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ ಚಿತ್ರದಲ್ಲಿ ತೋರಿಸಿದಂತೆ ಕಂಟೈನರ್‌ಗಳಲ್ಲಿ ಮನುಷ್ಯರ ಕಳ್ಳಸಾಗಣೆ ನಿಜ ಜೀವನದಲ್ಲೂ ನಡೆಯುತ್ತಿದೆ ಎಂದು ವಿವರಿಸಿದರು.
ವಿದೇಶಕ್ಕೆ ಹೋದ ನಂತರ ಅಲ್ಲಿ ತೊಂದರೆಗೆ ಸಿಲುಕಿದವರನ್ನು ರಕ್ಷಿಸುವುದು ಅತ್ಯಂತ ಕಷ್ಟಕರ. ಆದ್ದರಿಂದ, ಯಾವುದೇ ವ್ಯಕ್ತಿ ಅಥವಾ ಯುವಕರು ಸಂಶಯಾಸ್ಪದ ರೀತಿಯಲ್ಲಿ ವಿದೇಶಕ್ಕೆ ಹೊರಡುತ್ತಿದ್ದರೆ ಅಥವಾ ನಕಲಿ ಏಜೆಂಟರ ಮಾತಿಗೆ ಮರುಳಾಗುತ್ತಿದ್ದರೆ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ತಳಮಟ್ಟದ ಸಿಬ್ಬಂದಿ ಅವರಿಗೆ ಸೂಕ್ತ ಜಾಗೃತಿ ಮೂಡಿಸಿ ತಡೆಯಬೇಕು. ಜಾಗೃತಿಯೇ ಈ ಸಮಸ್ಯೆಗೆ ಪ್ರಮುಖ ಪರಿಹಾರ ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ, ಮಾನವ ಕಳ್ಳಸಾಗಾಣಿಕೆಯು ತರಕಾರಿ ಮಾರಾಟದಷ್ಟೇ ಸುಲಭವಾಗಿ ಜೀವಗಳನ್ನು ಮಾರಾಟ ಮಾಡುವ ಕ್ರೂರ ವ್ಯವಸ್ಥೆಯಾಗಿದ್ದು, ಸಮಾಜದಲ್ಲಿ ಇದರ ವಿರುದ್ಧ ತೀವ್ರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಸಿನಿಮಾಗಳು ಸಮಾಜದ ನೈಜ ಘಟನೆಗಳನ್ನು ಬಿಂಬಿಸುತ್ತವೆ. ಹುಲಿಯಾ ಸಿನಿಮಾದಲ್ಲಿ ಮಗುವಿನ ಕೈ-ಕಾಲುಗಳನ್ನು ತುಂಡರಿಸಿ, ಕಣ್ಣಿಗೆ ಆಸಿಡ್, ಉಪ್ಪು ಹಾಕಿ ಭಿಕ್ಷಾಟನೆಗೆ ತಳ್ಳುವ ದೃಶ್ಯವನ್ನು ನೋಡಿ ನಾನು ಎರಡೆರಡು ದಿನ ನಿದ್ದೆ ಮಾಡಿರಲಿಲ್ಲ. ಜಾಕಿ, ಮರ್ದಾನಿ, ಟೇಕನ್ ಹಾಗೂ ಸೆಕ್ಟರ್ ೩೬ ನಂತಹ ಚಲನಚಿತ್ರಗಳು ಮಾನವ ಕಳ್ಳಸಾಗಾಣಿಕೆಯ ವಿವಿಧ ಆಯಾಮಗಳನ್ನು ತೆರೆದಿಡುತ್ತವೆ ಎಂದರು.
ಮಾನವ ಕಳ್ಳಸಾಗಾಣಿಕೆ ಎಂದರೆ ಕೇವಲ ಅಪಹರಣ ಮಾತ್ರವಲ್ಲ. ಬಡತನ ಹಾಗೂ ಸಾಮಾಜಿಕವಾಗಿ ದುರ್ಬಲರಾಗಿರುವ ಹೆಣ್ಣುಮಕ್ಕಳಿಗೆ ದುಬೈ ಅಥವಾ ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮದುವೆ ಮಾಡುವುದು, ಪ್ರೀತಿ-ಪ್ರೇಮದ ಬಲೆಗೆ ಬೀಳಿಸಿ ಹೆತ್ತವರಿಂದ ದೂರ ಕರೆದೊಯ್ದು ಮುಂಬೈನAತಹ ಮಹಾನಗರಗಳಲ್ಲಿ ಮಾರಾಟ ಮಾಡುವುದು ಕೂಡ ಇದರ ಭಾಗವೇ ಆಗಿದೆ. ಒಮ್ಮೆ ಈ ಜಾಲಕ್ಕೆ ಸಿಲುಕಿದ ಹೆಣ್ಣುಮಕ್ಕಳು ವರ್ಷಗಟ್ಟಲೆ ನರಕಯಾತನೆ ಅನುಭವಿಸಿ, ರೋಗರುಜಿನಗಳಿಗೆ ತುತ್ತಾಗುವ ಪರಿಸ್ಥಿತಿ ಇದೆ. ಉಚಿತ ಊಟ, ವಸತಿ ಕೊಟ್ಟು ಕೆಲಸ ಕೊಡಿಸುತ್ತೇವೆ ಎಂದು ನಂಬಿಸುವ ಗ್ಯಾಂಗ್‌ಗಳ ಬಗ್ಗೆಯೂ ಎಚ್ಚರದಿಂದಿರಬೇಕು ಎಂದು ತಿಳಿಸಿದರು.
ವಕೀಲ ಸುಜೇಂದ್ರ ಮಾತನಾಡಿ, ಒಡವೆ, ಚಿನ್ನ ಹಾಗೂ ಮಾದಕ ವಸ್ತುಗಳನ್ನಷ್ಟೇ ಅಲ್ಲದೆ, ಹೆಣ್ಣುಮಕ್ಕಳು, ಮಕ್ಕಳು ಹಾಗೂ ಪುರುಷರನ್ನೂ ಕೂಡ ವಿಭಿನ್ನ ಉz್ದೆÃಶಗಳಿಗಾಗಿ ಕಳ್ಳಸಾಗಣೆ ಮಾಡಿ ಮಾರಾಟ ಮಾಡುವ ದಂಧೆ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳ್ಳಸಾಗಣೆದಾರರು ಸದಾ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿ ಜನರನ್ನು ವಂಚಿಸಲಾಗುತ್ತದೆ. ವಿಶೇಷವಾಗಿ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಮಸ್ಯೆಗಳಲ್ಲಿರುವವರನ್ನು ಗುರುತಿಸಿ, ಅವರ ವಿಶ್ವಾಸ ಗಳಿಸಿ ನಂತರ ಮೋಸ ಮಾಡಲಾಗುತ್ತದೆ. ಉದ್ಯೋಗದ ಆಸೆ ತೋರಿಸಿ ದೇಶದ ಗಡಿ ದಾಟಿಸಿ ಗುಲಾಮಗಿರಿಯ ಚಕ್ರವ್ಯೂಹಕ್ಕೆ ತಳ್ಳಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ವಿ.ಹನುಮಂತಪ್ಪ ಮಾನವ ಕಳ್ಳಸಾಗಣೆ ತಡೆ ಸಂಬAಧಿತ ಕಾಯ್ದೆ ಮತ್ತು ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.
ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರುಗಳಾದ ವಿ.ಪ್ರಕಾಶ್, ಸುಜಾತ, ದ್ಯಾವಪ್ಪ. ಎಸ್.ಬಿ.,ಲತಾ. ಜೆ., ಧನವತಿ, ಶರತ್ ಕುಮಾರ್. ಕೆ.ಎಸ್. ಕಾನೂನು ನೆರವು ಅಭಿರಕ್ಷಕರಾದ ಸಿ.ಪಿ.ದುಗ್ಗೇಗೌಡ, ನಟರಾಜು ಡಿ.ಹಾಗೂ ಶಾಂತಿ. ಸಿ., ಡಿ.ಬಿ.ದೀಪಕ್, ರವೀಂದ್ರ ಎ., ರಜತ್ ಎಂ.ಆರ್., ಎನ್.ಎಚ್.ಯೋಗೀಶ್ ಹಾಗೂ ಆರ್.ರಮೇಶ್ ಮತ್ತಿತರರಿದ್ದರು.