ಮೂಡಿಗೆರೆ ಪಟ್ಟಣದ ತತ್ಕೊಳ ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಕಾಡು ಬಳ್ಳಿ ಹಬ್ಬಿರುವುದು. 
ಚಿಕ್ಕಮಗಳೂರು

ಮೂಡಿಗೆರೆಯಲ್ಲಿ ನೀರು ಪೂರೈಕೆಗೆ ಅಡ್ಡಿಯಾದ ವಿದ್ಯುತ್

ಮೂಡಿಗೆರೆ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಮಿತಿ ಮೀರಿದೆ. ಆಗಾಗ ಕೈ ಕೊಡುತ್ತಿರುವ ವಿದ್ಯುತ್‌ನಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಮೂಡಿಗೆರೆ ಪಟ್ಟಣದಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ ವಿದ್ಯುತ್‌ಕಡಿತ ಆರಂಭವಾಗುತ್ತಿದೆ. ದಿನದಲ್ಲಿ ಏಳೆಂಟು ಬಾರಿ ಕಡಿತಗೊಳಿಸಲಾಗುತ್ತದೆ. ಒಮ್ಮೆ ಹೋದರೆ ಒಂದು ಗಂಟೆ ನಂತರ ಮತ್ತೆ ಬರುತ್ತಿದೆ. ಪಟ್ಟಣದಲ್ಲಿ ಮರ-ಗಿಡಗಳು ಕಡಿಮೆಯಿದ್ದರೂ ಜಂಗಲ್ಕಟ್ ನೆಪದಲ್ಲಿ ಮೆಸ್ಕಾಂ ಸಿಬ್ಬಂದಿ ಆಗಾಗ ವಿದ್ಯುತ್ ಕಡಿತಗೊಳಿಸುತ್ತಾರೆ. ಅಲ್ಲಲ್ಲಿ ಕಾಡುಬಳ್ಳಿ, ಮರದ ರೆಂಬೆ ವಿದ್ಯುತ್‌ತಂತಿ ಮೇಲೆ ಆವರಿಸಿದ್ದರೂ ಅದನ್ನು ಬೇಸಿಗೆಯಲ್ಲಿ ತೆರವುಗೊಳಿಸಲು ಮೆಸ್ಕಾಂ ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಸಂಜೆ ವೇಳೆಗೆ ಮಳೆಯಾಗುವ ಮುನ್ಸೂಚನೆ ದೊರೆತ ಕೂಡಲೇ ವಿದ್ಯುತ್ ಕಡಿತಗೊಳಿಸಲಾಗುತ್ತದೆ.
ಬೇಸಿಗೆಯಲ್ಲೇ ಈ ರೀತಿ ವಿದ್ಯುತ್ ಕಡಿತಗೊಂಡರೆ ಮಳೆಗಾಲದಲ್ಲಿ ಪಟ್ಟಣದ ನಾಗರಿಕರಿಕೆ ವಿದ್ಯುತ್ ಪೂರೈಕೆ ಕನಸಿನ ಮಾತಾಗಿದೆ. ವಿದ್ಯುತ್‌ಕೊರತೆ ಕಾರಣ ಪಟ್ಟಣದ ನಿವಾಸಿಗಳಿಗೆ 2 ದಿನಕೊಮ್ಮೆಯೂ ಪಪಂನಿಂದ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಟ್ಟಣದಲ್ಲಿ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಉಂಟಾಗಿದೆ.
ಬಣಕಲ್ನಲ್ಲಿ ವಿದ್ಯುತ್ ಉಪ ಕೇಂದ್ರವಿದೆ. ಆದರೂ ಬಣಕಲ್ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಮಿತಿಮೀರಿದೆ. ಜನ್ನಾಪುರದಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸಲು 2016 ರಲ್ಲಿ 18 ಕೋಟಿ ರೂ. ಸರ್ಕಾರದಿಂದ ಬಿಡುಗಡೆಯಾಗಿತ್ತು. ಜಾಗದ ಸಮಸ್ಯೆಯಿಂದ ಉಪಕೇಂದ್ರ ನಿರ್ಮಾಣ ನನೆಗುದಿಗೆ ಬಿದ್ದು 2024ರಲ್ಲಿ ಕಾಮಗಾರಿ ಆರಂಭವಾಗಿದೆ. ಅದರೆ ಈವರೆಗೂ ಪೂರ್ಣಗೊಂಡಿಲ್ಲ. ಜನ್ನಾಪುರದ ಉಪಕೇಂದ್ರ ಉದ್ಘಾಟನೆಯಾದರೆ ಗೋಣಿಬೀಡು ಹೋಬಳಿಯ ವಿದ್ಯುತ್ ಸಮಸ್ಯೆ ಬಗೆಹರಿಯ ಬಹುದು ಎಂದು ಜನ ಕಾಯುತ್ತಿದ್ದಾರೆ. ಆದರೆ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ