ಚಾರ್ಮಾಡಿ ಘಾಟ್ ಅರಣ್ಯದಲ್ಲಿ ರಾಶಿ ಬಿದ್ದ ತ್ಯಾಜ್ಯ. 
ಚಿಕ್ಕಮಗಳೂರು

ಪ್ಲಾಸ್ಟಿಕ್ ಮುಕ್ತ ಪಾದಯಾತ್ರೆ ಅದುವೇ ಪವಿತ್ರಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ಪಾದಯಾತ್ರೆ ಹಾದಿ ಉದ್ದಕ್ಕೂ ತ್ಯಾಜ್ಯ ರಾಶಿ
  • ತ್ಯಾಜ್ಯ ವಿಲೇವಾರಿಯೇ ಸವಾಲು
  • ಪಾದಯಾತ್ರಿಗಳಲ್ಲಿ ಮೂಡದ ಸ್ವಚ್ಛತೆ ಜಾಗೃತಿ
ಬಣಕಲ್: ಮಹಾಶಿವರಾತ್ರಿ ಹಿನ್ನಲೆಯಲ್ಲಿ ಸಾವಿರಾರು ಭಕ್ತಾಧಿಗಳು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಾರೆ. ಅದರೆ ಪಾದಯಾತ್ರಿಗಳ ನಿರ್ಲಕ್ಷ್ಯದಿಂದ ಚಾರ್ಮಾಡಿ ಘಾಟ್ ಅರಣ್ಯದ ನಡುವೆ ಸಾಗಿರುವ ಹೆದ್ದಾರಿಯ ಎರಡು ಬದಿಗಳಲ್ಲಿ ತ್ಯಾಜ್ಯದ ರಾಶಿಯೇ ನಿರ್ಮಾಣವಾಗಿದೆ.
ಚಾರ್ಮಾಡಿ ಪ್ರದೇಶದಲ್ಲಿ ಪರಿಸರ ಮಾಲಿನ್ಯ ತಪ್ಪಿಸಲು ದಾರಿ ಉದ್ದಕ್ಕೂ ಸ್ಥಳೀಯ ಗ್ರಾಪಂ ಮತ್ತು ಬೇರು ಭೂಮಿ ತಂಡ 500 ಮೀಟರ್‌ಗೆ ಒಂದು ಕಸದ ಚೀಲವನ್ನು ಕಟ್ಟಿದ್ದಾರೆ. ಅದರೆ ಬಹುತೇಕ ಪಾದಯಾತ್ರಿಗಳು ತ್ಯಾಜ್ಯವನ್ನು ಎಲ್ಲಂದರಲ್ಲಿ ಹಾಕಿರುವುದರಿಂದ ತ್ಯಾಜ್ಯದ ರಾಶಿಯೇ ನಿರ್ಮಾಣವಾಗಿದೆ.
ಪಾದಯಾತ್ರಿಗಳಿಗೆ ಸಂಘ ಸಂಸ್ಥೆಗಳು, ದಾನಿಗಳು ರಸ್ತೆ ಬದಿಯಲ್ಲಿಯೇ ಊಟ, ಉಪಹಾರ, ತಂಪು ಪಾನೀಯ, ಕಲ್ಲಂಗಡಿ, ಬಾದಾಮಿ ಹಾಲು, ಕುಡಿಯುವ ನೀರನ್ನು ರಸ್ತೆ ಬದಿ ವಿತರಣೆ ಮಾಡಿ ಹೋಗುತ್ತಾರೆ. ಆದರೆ ಅಲ್ಲಿ ಸಂಗ್ರಹವಾದ ತಟ್ಟೆ, ಲೋಟ, ಪ್ಲಾಸ್ಟಿಕ್ ಬಾಟಲಿ ಮುಂತಾದ ತ್ಯಾಜ್ಯಗಳನ್ನು ತೆರವುಗೊಳಿಸುವುದಿಲ್ಲ. ತ್ಯಾಜ್ಯ ಹಾಕಲು ತೊಟ್ಟಿಗಳನ್ನು ಇಟ್ಟಿರುವುದಿಲ್ಲ. ಇದರಿಂದ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿಯೇ ಸಂಗ್ರಹವಾಗಿದೆ.
ನದಿಮೂಲ ಕಲುಷಿತ, ಪ್ರಾಣಿಗಳಿಗೆ ಕಂಟಕ
ಫಲ್ಗುಣಿಯಿಂದ ಕೊಟ್ಟಿಗೆಹಾರದವರೆಗೂ ಹೇಮಾವತಿ ನದಿ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಈ ಮಾರ್ಗವಾಗಿ ಬರುವ ಪಾದಯಾತ್ರಿಗಳು ಶೌಚ, ಸ್ನಾನ, ಬಟ್ಟೆ ತೊಳೆಯುವುದು ಮುಂತಾದವುಗಳಿಗೆ ನದಿ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ನದಿ ತೀರದಲ್ಲಿ ಮಲಮೂತ್ರ ವಿಸರ್ಜನೆ ಮಾಡಿ ಕಸ ಎಸೆದು ಹೋಗುತ್ತಿದ್ದಾರೆ. ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಮೂಲವಾದ ಹೇಮಾವತಿ ನದಿ ಕಲುಷಿತಗೊಳ್ಳುತ್ತಿದೆ. ಜತೆಗೆ ಚಾರ್ಮಾಡಿ ಘಾಟ್ ಅರಣ್ಯದ ನಡುವೆ ರಸ್ತೆ ಬದಿಯಲ್ಲಿ ಎಸೆದ ಪ್ಲಾಸ್ಟಿಕ್ ಲೋಟ, ತಟ್ಟೆಗಳಲ್ಲಿನ ಆಹಾರ ತ್ಯಾಜ್ಯಗಳನ್ನು ಮಂಗ, ಅಳಿಲು ಮುಂತಾದ ವನ್ಯಮೃಗಗಳು ತಿನ್ನುವುದರಿಂದ ಅವುಗಳಿಗೂ ಕುತ್ತು ಬರುವ ಆತಂಕ ನಿರ್ಮಾಣವಾಗಿದೆ.
ಅರಣ್ಯ ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ
ಚಾರ್ಮಾಡಿ ಘಾಟ್‌ನ ನಡುವೆ ಹಾದು ಹೋಗಿರುವ ಹೆದ್ದಾರಿ ಬದಿ ಪಾದಯಾತ್ರಿಗಳಿಗೆ ದಾನಿಗಳು ರಸ್ತೆ ಬದಿಯಲ್ಲಿಯೇ ಊಟ, ಉಪಹಾರ, ತಂಪು ಪಾನೀಯ ಮುಂತಾದವುಗಳನ್ನು ನೀಡುತ್ತಾರೆ. ಪಾದಯಾತ್ರಿಗಳು ರಸ್ತೆ ಬದಿಯಲ್ಲಿಯೇ ಊಟ , ಉಪಹಾರ ಸೇವಿಸಿ ಪ್ಲಾಸ್ಟಿಕ್ ತಟ್ಟೆ, ಲೋಟ, ಬಾಟಲಿಗಳನ್ನು ರಸ್ತೆಯಲ್ಲಿಯೇ ಹಾಕುತ್ತಿದ್ದಾರೆ. ಇವುಗಳು ಅರಣ್ಯ ಸೇರಿವೆ. ರಸ್ತೆ ಬದಿ ಕಂದಕದಲ್ಲಿ ಉದ್ದಕ್ಕೂ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹೊರ ತೆಗೆಯುವುದು ಕಷ್ಟಸಾಧ್ಯವಾಗಿರುವುದರಿಂದ ಶಾಶ್ವತವಾಗಿ ಅರಣ್ಯಪ್ಲಾಸ್ಟಿಕ್ ಮಯವಾಗಲಿದೆ.