ಬೀರೂರಿನ ಬೋವಿ ಕಾಲನಿಯಲ್ಲಿರುವ ಕುಕ್ಕವಾಡದಮ್ಮ ದೇವಾಲಯದಿಂದ ಗುರುವಾರ ಚಂದ್ರಶೇಖರ್ ಮತ್ತಿತರ ಮಾಲಾಧಾರಿಗಳು ಕೇರಳದ ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟರು.  
ಚಿಕ್ಕಮಗಳೂರು

ಶಬರಿಮಲೆಗೆ ಭಕ್ತರ ಪಾದಯಾತ್ರೆ

ಜಿ. ಗಜೇಂದ್ರ
ಬೀರೂರು: ಬೀರೂರಿನ ಭೋವಿ ಕಾಲನಿಯಲ್ಲಿರುವ ಕುಕ್ಕವಾಡದಮ್ಮ ದೇವಾಲಯದಿಂದ ಗುರುವಾರ ಬೆಳಗಿನ ಜಾವ ಐವರು ಭಕ್ತರು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಪಾದಯಾತ್ರೆ ಆರಂಭಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದ ಈ ಭಕ್ತರು ಕಳೆದ 4 ವರ್ಷಗಳಿಂದ ಶಬರಿಮಲೆಗೆ ಪಾದಯಾತ್ರೆಯನ್ನು ಆರಂಭಿಸಿದ್ದು ಇವರಿಗೆ ಮಾರ್ಗದರ್ಶಕರಾಗಿ ದಾವಣಗೆರೆಯ ಲಕ್ಷ್ಮಣರಾವ್ ಇದ್ದಾರೆ. ಈ ಗುಂಪಿನಲ್ಲಿ ಬೀರೂರಿನ ಚಂದ್ರಶೇಖರ್, ಕಿರಣ್, ಗದಗ ಜಿಲ್ಲೆ ಲಕ್ಷ್ಮೇಶ್ವರದ ಮಹೇಂದ್ರ ಮತ್ತು ಚನ್ನಗಿರಿಯ ನಾಗರಾಜ್ ಇದ್ದಾರೆ. 
 ಲಕ್ಷಣರಾವ್ ದೇಶದ ನಾಲ್ಕೂ ಮೂಲೆಯಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳನ್ನು ಕಾಲ್ನಡಿಗೆಯ ಮೂಲಕವೇ ದರ್ಶಿಸಿದ್ದು ಅಪಾರ ಅನುಭವ ಹೊಂದಿದ್ದು ಬಾಕಿ ನಾಲ್ವರಲ್ಲಿ ಇಬ್ಬರು ಈ ವರ್ಷ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. 
ಲಕ್ಷ್ಮಣ್ ರಾವ್ ನಮ್ಮಂತ ಭಕ್ತರಿಗೂ ಪ್ರೇರಕರಾಗಿದ್ದಾರೆ. ಶಬರಿಮಲೆಯಲ್ಲಿ ಒಮ್ಮೆ ಪರಿಚಯ ಬೆಳೆದು ಸ್ನೇಹ ಉಂಟಾಗಿ, ಈಗ ನಾವು ಐದೂ ಮಂದಿ ಒಂದೇ ಮನೆಯವರಂತೆ ಆಗಿದ್ದೇವೆ. ಕಾಲ್ನಡಿಗೆಯ ಮೂಲಕ ಶಬರಿಮಲೆ ತಲುಪಲಿಕ್ಕೆ ಬಹುಶಃ 25 ದಿನಗಳಾಗಬಹುದು. ದಿನ ಒಂದಕ್ಕೆ 35 ರಿಂದ 40 ಕಿ.ಮೀ. ಕ್ರಮಿಸಿ 780 ಕಿ.ಮೀ.ದೂರವಿರುವ ಶಬರಿಮಲೆಗೆ ನಾವು ತಲುಪುತ್ತೇವೆ. ಈವರೆಗೆ ನಮ್ಮ ಅನುಭವದಲ್ಲಿ ಯಾವುದೇ ರೀತಿಯ ಸಮಸ್ಯೆ  ಎದುರಾಗಿಲ್ಲ. ನನ್ನ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಈ ಕಠಿಣ ವ್ರತವನ್ನು ಕೈಗೊಂಡಿದ್ದೇನೆ ಎನ್ನುತ್ತಾರೆ ಚಂದ್ರಶೇಖರ್.