ಬಾಳೆಹೊನ್ನೂರಲ್ಲಿ ಛಾಯಾಗ್ರಾಹಕರ ದಿನಾಚರಣೆ ಆಚರಿಸಲಾಯಿತು. ಚೈತನ್ಯ ವೆಂಕಿ, ಸೇತುರಾಯ್, ಚಂದ್ರಶೇಖರ್ ಬಾಬ್ಲಿ, ವಿ.ರೋಹಿತ್, ಹಿರಿಯಣ್ಣ, ಕಿಶೋರ್, ಸವಿನ್ ಇದ್ದರು.
ಬಾಳೆಹೊನ್ನೂರು: ಛಾಯಾಗ್ರಹಣ ಕೇವಲ ವೃತ್ತಿಯಲ್ಲ, ಅದು ಪ್ರಪಂಚದ ಅತ್ಯುದ್ಭುತ ಕಲೆ ಎಂದು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಉದ್ಯೋಗಿ, ಕಲಾವಿದ ಸೇತುರಾಯ್ ಹೇಳಿದರು.
ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟ ಹಾಗೂ ಶಾರಾಮ್ ಕ್ಯಾಮೆರಾ ಕ್ಲೌಡ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಛಾಯಾಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿ, ಛಾಯಾಗ್ರಹಣ 185 ವರ್ಷಗಳ ಇತಿಹಾಸ ಹೊಂದಿದೆ. ಛಾಯಾಗ್ರಾಹಕರು ಕಲೆ, ಸೃಜನಶೀಲತೆ ಹಾಗೂ ವೃತ್ತಿಪರ ಸೇವೆ ಮೂಲಕ ಸಮಾಜದಲ್ಲಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ವೇಗವಾಗಿ ಬೆಳೆದರೂ ಒಂದು ಸುಂದರ ಕ್ಷಣವನ್ನು ಅರ್ಥ ಪೂರ್ಣವಾಗಿ ಸೆರೆ ಹಿಡಿಯುವಲ್ಲಿ ಛಾಯಾಗ್ರಾಹಕರ ಕಲಾತ್ಮಕ ದೃಷ್ಟಿ ಮತ್ತು ಅನುಭವಕ್ಕೆ ಪರ್ಯಾಯವಿಲ್ಲ ಎಂದರು.
1839ರಲ್ಲಿ ಫ್ರೆಂಚ್ ಸರ್ಕಾರ ಛಾಯಾಗ್ರಹಣ ತಂತ್ರಜ್ಞಾನದ ಪೇಟೆಂಟ್ ಅನ್ನು ಖರೀದಿಸಿ ಅದನ್ನು ಜಗತ್ತಿಗೆ ಮುಕ್ತ ಕೊಡುಗೆಯಾಗಿ ನೀಡಿತು. ಈ ದಿನದ ನೆನಪಿಗಾಗಿ ಆ.19ರಂದು ಛಾಯಾಗ್ರಾಹಕರ ದಿನಾಚರಣೆ ಆಚರಿಸಲಾಗುತ್ತಿದೆ. ಇಂದು ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್ ಕ್ಯಾಮೆರಾಗಳಿದ್ದು, ಛಾಯಾಚಿತ್ರ ಮುದ್ರಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ನಮ್ಮ ಸುಂದರ ಕ್ಷಣಗಳು ಹಲವಾರು ವರ್ಷ ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟಕರವಾಗಿದೆ. ಈ ಹಿಂದೆ ಮುದ್ರಿಸಿದ ಛಾಯಾಚಿತ್ರಗಳನ್ನು ನೋಡಿದರೆ ಇಂದು ಮನಸ್ಸಿಗೆ ಹಲವು ಅನುಭವ ದೊರೆಯಲಿದೆ ಎಂದರು.
ಛಾಯಾಗ್ರಾಹಕರ ದಿನದ ಅಂಗವಾಗಿ ವಿವಿಧ ನಮೂನೆಯ ಹಳೆಯ ಕ್ಯಾಮೆರಾಗಳು ಹಾಗೂ ಹಳೆಯ ಛಾಯಾಚಿತ್ರವನ್ನು ಪ್ರದರ್ಶಿಸಲಾಯಿತು. ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ್ ಬಾಬ್ಲಿ, ವಿ.ರೋಹಿತ್, ಹಿರಿಯಣ್ಣ, ಕಿಶೋರ್ ಆಚಾರ್ಯ, ಸವಿನ್ ಆಚಾರ್ಯ, ಜೀವನ್, ಎಚ್.ಗೋಪಾಲ್, ಕೆ.ಆರ್.ಭೂದೇಶ, ಸೋಮೇಶ್‌ಗೌಡ, ಮಂಜಪ್ಪ, ಇಬ್ರಾಹಿಂ ಶಾಫಿ, ಶೇಖರ್ ಇಟ್ಟಿಗೆ, ಶಶಿಧರ್, ಎಸ್.ಎಲ್.ಚೇತನ್, ಮನುಕುಮಾರ್, ಸನತ್‌ಶೆಟ್ಟಿ, ವಿ.ಅಶೋಕ, ಬಿ.ಎಸ್.ನಾಗರಾಜ್ ಮತ್ತಿತರರು ಇದ್ದರು.