ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ಏರ್ಪಡಿಸಿದ್ದ ಕೆರೆ ತುಂಬುವ ಯೋಜನೆಯ ಮೊದಲ ಹಂತದ ಕಾಮಗಾರಿ ಪ್ರಾಯೋಗಿಕ ಚಾಲನೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್ ಗಂಗಾಪೂಜೆ ನೆರವೇರಿಸಿದರು. ಹರ್ಷ, ತ್ಯಾಗರಾಜ್, ತಿಪ್ಪರಾಯಪ್ಪ, ಗೋವಿಂದಪ್ಪ, ಬಿ.ಜಿ.ಬಸಪ್ಪ ಇದ್ದರು.
ಬೀರೂರು: ಬರದ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಡೂರು ತಾಲೂಕಿಗೆ ಇಂದು ಈ ಕಳಂಕದಿಂದ ದೂರಾಗುವ ಸಮಯ ಬಂದಿದೆ. ಬರದ ನಾಡಿಗೆ ಶಾಶ್ವತ ನೀರಾವರಿಯ ಕನಸು ನನಸಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ದೊಟ್ಟಘಟ್ಟ ಗ್ರಾಮದಲ್ಲಿ ಭಾನುವಾರ ಕೆರೆ ತುಂಬುವ ಯೋಜನೆಯ ಮೊದಲ ಹಂತದ ಕಾಮಗಾರಿ ಪ್ರಾಯೋಗಿಕ ಚಾಲನೆ ಮತ್ತು ಗಂಗಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಡೀ ತಾಲೂಕು ಪ್ರತಿವರ್ಷ ಮಳೆ ಇಲ್ಲದೆ ಬರಗಾಲಕ್ಕೆ ತುತ್ತಾಗುತ್ತಿತ್ತು. ಇಲ್ಲಿನ ರೈತರು ಶಾಶ್ವತ ನೀರಾವರಿಗೆ ಒತ್ತು ನೀಡುವಂತೆ ಬಹಳಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದರೂ ಅದು ಕಾರ್ಯಗತವಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರ ಶಾಶ್ವತ ನೀರಾವರಿ ಕಲ್ಪಿಸಲು ಅನುದಾನ ನೀಡಿದೆ ಎಂದರು.
ದೋರನಾಳು ಗ್ರಾಮದ ಬಳಿ ಪಂಪ್‌ಹೌಸ್ ನಿರ್ಮಿಸಿದ್ದು, 1350 ಎಚ್‌ಪಿ ಮೋಟಾರ್ ಪಂಪ್‌ನಿಂದ ನೀರನ್ನು ತರಲಾಗಿದೆ. ಇಂತಹ 4 ಮೋಟಾರ್ ಕಾರ್ಯನಿರ್ವಹಿಸುತ್ತದೆ. ಆದರೆ ಇಂದು ಪ್ರಾಯೋಗಿಕ ಪರೀಕ್ಷೆಗಾಗಿ ಒಂದಕ್ಕೆ ಮಾತ್ರ ಚಾಲನೆ ನೀಡಲಾಗಿದೆ. ಈ ಯೋಜನೆಗೆ 1281.80 ಕೋಟಿ ಒಟ್ಟು ರೂ. ಅನುದಾನ ಅಗತ್ಯವಾಗಿತ್ತು. ಆದರೆ ಇಂದಿನ ಮಾರುಕಟ್ಟೆಯ ಬೆಲೆ ಏರಿಕೆಯಾಗಿರುವುದರಿಂದ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸಿ 240 ಕೋಟಿ ರೂ. ಹಣ ಹೆಚ್ಚುವರಿಯಾಗಿಸಿದೆ. ಅದರಲ್ಲಿ 4 ಹಂತಗಳನ್ನಾಗಿ ವಿಂಗಡಿಸಲಾಯಿತು ಎಂದು ಹೇಳಿದರು.
ಮೊದಲ ಹಂತದಲ್ಲಿ 464.47 ಕೋಟಿ ರೂ. ಮತ್ತು ಎರಡನೇ ಹಂತದಲ್ಲಿ 382.61 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಈ ಪೈಕಿ ಮೊದಲನೇ ಹಂತದಲ್ಲಿ 55 ಕೆರೆಗಳು ಹಾಗೂ ಎರಡನೇ ಹಂತದಲ್ಲಿ 78 ಕೆರೆಗಳನ್ನು ತುಂಬಿಸಲಾಗುತ್ತದೆ. ವಿಶ್ವೇಶ್ವರಯ್ಯ ಜಲ ಮಂಡಳಿ ಅಧಿಕಾರಿಗಲು ಶ್ರಮಪಟ್ಟು ಕಾಮಗಾರಿ ಮೊದಲ ಹಂತ ಪೂರ್ಣಗೊಳಿಸಿದ್ದಾರೆ. ಇನ್ನೂ ಯೋಜನೆಯ 4 ಹಂತಗಳು ಸಂಪೂರ್ಣಗೊಂಡ ನಂತರ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಂದ ಪೂಜಾ ಕಾರ್ಯ ನೆರವೇರಿಸಲಾಗುವುದು ಎಂದರು.
ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಹರ್ಷ, ಎಇ ತ್ಯಾಗರಾಜ್, ತೆಲುಗುಗೌಡ ಸಮಾಜದ ತಿಪ್ಪರಾಯಪ್ಪ, ಗೋವಿಂದಪ್ಪ, ಬಿ.ಜಿ.ಬಸಪ್ಪ, ಆನಂದ್, ಗೋವಿಂದಸ್ವಾಮಿ, ಕಡೂರು ಬೀರೂರು ಅಡಿಕೆ ಬೆಳೆಗಾರರ ಸಂಘದ ಸೋಮಶೇಖರ್, ಶಂಕರಣ್ಣ, ಗಂಗಾಧರ್, ಲೋಕೇಶ್, ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಬೀರೂರು ದೇವರಾಜ್, ಮಾನಿಕ್ ಬಾಷಾ ಹಾಗೂ ರೈತರುಗಳು ಇದ್ದರು.