ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವನೂರು ಸರ್ಕಾರಿ ಶಾಲೆಯಲ್ಲಿ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶಾಲಾ ಕೊಠಡಿಗಳು ಹಾಗೂ ಶೌಚಗೃಹಗಳನ್ನು ಶಾಸಕ ಎಚ್‌.ಡಿ.ತಮ್ಮಯ್ಯ ಉದ್ಘಾಟಿಸಿದರು. ಎ.ಎನ್‌.ಮಹೇಶ್, ಎಚ್.ಪಿ.ಮಂಜೇಗೌಡ, ದೀಪಾ ದಕ್ಷಿಣಾಮೂರ್ತಿ, ರವಿಕುಮಾರ್, ಎಚ್‌.ಎಸ್‌.ಮಹಾಲಿಂಗಪ್ಪ ಮತ್ತಿತರರಿದ್ದರು. 
ಚಿಕ್ಕಮಗಳೂರು

ಆರೋಗ್ಯ, ಶಿಕ್ಷಣಕ್ಕೆ ಜನಪ್ರತಿನಿಧಿಗಳು ಆಧ್ಯತೆ ನೀಡಬೇಕು

ಚಿಕ್ಕಮಗಳೂರು: ಶಿಕ್ಷಣ, ಆರೋಗ್ಯ ಮತ್ತು ಜನರ ಬದುಕಿಗೆ ಜನಪ್ರತಿನಿಧಿಗಳು ಆದ್ಯತೆ ನೀಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದರು.
ಶಿಕ್ಷಣ ಕೇವಲ ಸರ್ಕಾರಿ ನೌಕರಿಗೆ ಅಲ್ಲ, ಜೀವನದಲ್ಲಿ ತಮ್ಮ ಬದುಕನ್ನು ರೂಪಿಸಲು ಈ ದೇಶದಲ್ಲಿ ಉತ್ತಮ ಪ್ರಜೆಯಾಗಲು ಬದುಕಲು ಬೇಕಾಗಿದೆ. ಇದು ಶಿಕ್ಷಣದಿಂದ ಮಾತ್ರ ಸಾಧ್ಯ. ಆಸ್ತಿ ಎಷ್ಟಿದ್ದರೆ ಏನು ಪ್ರಯೋಜನ. ಆಸ್ತಿಯನ್ನು ಕಳೆಯಬಹುದು. ಆದರೆ, ವಿದ್ಯೆಯನ್ನು ಕಳೆಯಲು ಸಾಧ್ಯವಿಲ್ಲ. ಜೊತೆಗೆ ಯಾರು ದೋಚಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದು ದೇಶದಲ್ಲಿ ಏಕಕಾಲದಲ್ಲಿ ಯೋಗ ದಿನಾಚರಣೆ ಮಾಡಲಾಗುತ್ತಿದೆ. ಹಾಗಾಗಿ ಪ್ರಪಂಚದ ನೂರಾರು ದೇಶಗಳಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಕಾರಣ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿರುವ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೧೨ ವರ್ಷ ಕಾಲ ಪ್ರಧಾನಿಯಾಗಿದ್ದರು ಎಂದರು.
ದಿನಸಿ, ಪೆಟ್ರೋಲ್, ಡಿಸೆಲ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ನಿಕಟ ಪೂರ್ವ ಸಿಎಂ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳನ್ನು ನೀಡಿದ್ದರಿಂದ ಜನರ ಬದುಕು ಸರಿ ಸಮಾನವಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುವ ಜತೆಗೆ ಬದುಕನ್ನು ಕಟ್ಟಿಕೊಡುತ್ತಿದೆ ಎಂದ ಅವರು, ಕಾಮಗಾರಿಯಲ್ಲೂ ನಾವು ಹಿಂದೆ ಬಿದ್ದಿಲ್ಲ. ದೇವನೂರು ಕೆರೆಯ ಏರಿಯನ್ನು ಅಗಲ ಮಾಡಿದ್ದೇವೆ, ಸಖರಾಯಪಟ್ಟಣ ಹೋಬಳಿಯಲ್ಲಿ ಲೋಕೊಪಯೋಗಿ ಇಲಾಖೆ ರಸ್ತೆಗಳಿಗೆ ೬೨ ಕೋಟಿ ರೂ.ಗಳ ಕಾಮಗಾರಿಗಳನ್ನು ಮಾಡಲಾಗಿದೆ. ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೩ ಕೋಟಿ ರೂಪಾಯಿ ಕಾಮಗಾರಿ ಮಾಡಿದ್ದೇವೆ. ದೇವನೂರು ಗ್ರಾಮದೊಳಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಎತ್ತಿನಹೊಳೆ ನೀರು ಬೆಳವಾಡಿಕೆರೆ, ಮಾಚೇನಹಳ್ಳಿ ಕೆರೆ, ಕುರುಬರಹಳ್ಳಿ ಕೆರೆ, ದೇವನೂರು ಕೆರೆಯನ್ನು ತುಂಬಿಸಿದ್ದೇವೆ. ಈ ಬಾರಿಯೂ ಕೂಡ ಈ ಕೆರೆಗಳನ್ನು ತುಂಬಿಸುವ ಭರವಸೆ ಇದೆ ಎಂದು ತಿಳಿಸಿದರು.
ಮೂಲಭೂತ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಿದರೆ, ಶಿಕ್ಷಕರನ್ನು ನೇಮಕ ಮಾಡಿದರೆ ಬಡವರ ಮನೆಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತದೆ. ಈ ಉದ್ದೇಶದಿಂದ ಈ ಸದ್ದುದೇಶದಿಂದ ಈ ಕೆಲಸವನ್ನು ಮಾಡಿದ್ದೇನೆ ಎಂದರು.
ಜನರ ಋಣವನ್ನು ತೀರಿಸುವ ಕೆಲಸ ನಾವುಗಳು ಮಾಡಲೇಬೇಕು. ಭದ್ರ ಉಪ ಕಣಿವೆ ಯೋಜನೆಯ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ. ಈ ಭಾಗದ ಕೆರೆ ತುಂಬಿಸಿ ನೀರು ಕೊಡುವುದು ನಮ್ಮ ಆದ್ಯತೆ ಎಂದು ತಿಳಿಸಿದರು.
ಪರಿಸರ ಮೌಲ್ಯಮಾಪನ ಸಮಿತಿಯ ಅಧ್ಯಕ್ಷ ಎ.ಎನ್. ಮಹೇಶ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ದಕ್ಷಿಣಾಮೂರ್ತಿ, ಉಪಾಧ್ಯಕ್ಷ ರವಿಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಸ್. ಮಹಾಲಿಂಗಪ್ಪ, ಉಪಾಧ್ಯಕ್ಷೆ ಭೂಮಿಕಾ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಮೋಹನ್ ನಾಯ್ಕ, ಕಡೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಪ್ರೇಮಾಕುಮಾರಿ ಸ್ವಾಗತಿಸಿದರು.