ಮೂಡಿಗೆರೆ ತಾಲೂಕಿನ ದೇವರಮನೆ ರಸ್ತೆಯಲ್ಲಿ ವಾಹನ ದಟ್ಟಣೆ.
ಮೂಡಿಗೆರೆ: ಪಟ್ಟಣದಲ್ಲಿರುವ ಕಿರಿದಾದ ರಸ್ತೆಗಳು ಹಾಗೂ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ,ಎಂ.ಜಿ.ರಸ್ತೆ, ತುಮಕೂರು-ಮಂಗಳೂರು ಹೆದ್ದಾರಿ ಹಾಗೂ ವಿವಿಧ ಪ್ರವಾಸಿ ತಾಣಗಳಿಗೆ ಸಾಗುವ ರಸ್ತೆಗಳಲ್ಲಿ ಸಂಚಾರದಟ್ಟಣೆ ಮಿತಿಮೀರಿದ್ದು, ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.
ಕೆ.ಎಂ.ರಸ್ತೆಯಲ್ಲಿ ಕಣ್ಣು ಹಾಯಿಸಿದಷ್ಟು ದೂರವು ಸಾಲುಗಟ್ಟಿ ನಿಲ್ಲುವ ವಾಹನದಿಂದ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿದು ರಸ್ತೆ ಪಕ್ಕದಲ್ಲಿ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿ ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಸಾಧ್ಯವಾಗದೆ ವಾಹನ ಸವಾರರು ಪರದಾಡುವಂತಾಗಿದೆ. ಹಿಂದೆ ಎತ್ತಿನಗಾಡಿ ತಿರುಗಾಡುತ್ತಿದ್ದ ಪಟ್ಟಣದ ಬಡಾವಣೆ ರಸ್ತೆಗಳು ಈಗಲೂ ಅಗಲೀಕರಣವಾಗದಿರುವುದು ಸಂಚಾರಕ್ಕೆ ಸಮಸ್ಯೆಯಾಗಿದೆ.
ಹೊರಗಿನಿಂದ ತಾಲೂಕಿನ ಪ್ರಮುಖ ಸ್ಥಳಗಳಿಗೆ ಬರುವ ಪ್ರವಾಸಿಗರು ಎಲ್ಲಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ ಇವುಗಳನ್ನು ತೆರವುಗೊಳಿಸಲು ಮತ್ತು ಟ್ರಾಫಿಕ್‌ನಲ್ಲಿ ಸಿಲುಕಿ ಸಾಲುಗಟ್ಟಿ ನಿಲ್ಲುವ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ರಸ್ತೆಗಿಳಿಯುತ್ತಿಲ್ಲ. ಗರ್ಭಿಣಿಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಟ್ರಾಫಿಕ್‌ಜಾಮ್ನಲ್ಲಿ ಸಿಲುಕಿ ಪಡುವ ಸಂಕಷ್ಟವನ್ನು ಸರಿಪಡಿಸಲು ಇದುವರೆಗೂ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ.
ಬಿಳಗುಳ ಗ್ರಾಮದ ಕೊಲ್ಲಿಬೈಲ್ ತಿರುವಿನಿಂದ ಹ್ಯಾಂಡ್‌ಪೋಸ್ಟ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಬೇಕು ಎಂಬುದು ಮೂರು ದಶಕಗಳ ಬೇಡಿಕೆಯಾಗಿದ್ದಾರೂ,ರಸ್ತೆ ವಿಸ್ತರಣೆಗೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಇದುವರೆಗೂ ಮುಂದಾಗಿಲ್ಲ. ರಸ್ತೆ ತೀರ ಕಿರಿದಾಗಿರುವುದರಿಂದ ಪಟ್ಟಣದಿಂದ ಹ್ಯಾಂಡ್‌ಪೋಸ್ಟ್ಗೆ 3 ಕಿ.ಮೀ ದೂರವಿದ್ದರೂ ಟ್ರಾಫಿಕ್ ನಲ್ಲಿ ಸಿಲುಕಿ ವಾಹನಗಳು ಸಂಚರಿಸಲು ಅರ್ಧಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.