ಮೂಡಿಗೆರೆಯಲ್ಲಿ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಶ್ವಿನಿ ಅವರನ್ನು ಗೌರವಿಸಲಾಯಿತು. 
ಚಿಕ್ಕಮಗಳೂರು

ನಮ್ಮ ಮನಸ್ಥಿತಿ ಬದಲಾಯಿಸಿಕೊಂಡಾಗ ಜೀವನದಲ್ಲಿ ನೆಮ್ಮದಿ ಸಾಧ್ಯ

ಜಿ.ಹೆಚ್. ಧನ್ಯಕುಮಾರ್
ಆಲ್ದೂರು: ನಾವು ಪ್ರಸ್ತುತ ಪರಿಸ್ಥಿತಿ ಬದಲಾಯಿಸಲು ಮುಂದಾಗಿದ್ದೇವೆ. ಅದರೆ ಆದನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ಮನಸ್ಥಿತಿ ಬದಲಾಯಿಸಿಕೊಂಡಾಗ ಮಾತ್ರ ನೆಮ್ಮದಿಯಿಂದ ಬದಕಲು ಸಾಧ್ಯ ಎಂದು ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮೂಡಿಗೆರೆ ತಾಲೂಕು ಘಟಕ ಮಹಂತಿನ ಮಠದಲ್ಲಿ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಬಸವೇಶ್ವರ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಒಂದು ಗಿಡ ಮರವಾಗಿ ಬೆಳೆದು ಲ ನೀಡಲು ನೀರು, ಗಾಳಿ, ಮಣ್ಣು, ಗೊಬ್ಬರದ ಆರೈಕೆ ಅವಶ್ಯ. ಅದರಂತೆ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಪರಿಶ್ರಮ, ಹೆತ್ತವರ ಸಹಕಾರ, ಗುರುಗಳ ಮಾರ್ಗದರ್ಶನದಿಂದ ಈ ಪುರಸ್ಕಾರ ಲಭಿಸಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರು.
ತಹಸೀಲ್ದಾರ್ ಅಶ್ವಿನಿ ಮಾತನಾಡಿ, ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದಿದ್ದೇವೆ ಎಂದು ಬೀಗದೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು. ಅಂಕದ ಜತೆಗೆ ನಡೆ, ನುಡಿ ಜೀವನದಲ್ಲಿ ಸಂಸ್ಕಾರ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 13 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಹಾಸಭಾ ರಾಜ್ಯ ನಿರ್ದೇಶಕ ಪೂರ್ಣೇಶ್, ತಾಲೂಕು ಅಧ್ಯಕ್ಷ ಬಿ.ಎಸ್.ಓಂಕಾರ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವನಮಾಲಾ, ಉಪಾಧ್ಯಕ್ಷೆ ಶಾಲಿನಿ ಮತ್ತಿತರರಿದ್ದರು.