ಬೆಂಬಲ ಬೆಲೆಯಡಿ ಖರೀದಿಸಿದ ರಾಗಿಯ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಶಿರಸ್ತೇದಾರ್ ಕೆ.ಆರ್.ನೀಲಾಂಬಿಕೆಗೆ ಮನವಿ ಸಲ್ಲಿಸಿದರು.  
ಚಿಕ್ಕಮಗಳೂರು

ರೈತರಿಗೆ ಸಕಾಲದಲ್ಲಿ ರಾಗಿ ಬಿಲ್ ಪಾವತಿಸಿ

ತರೀಕೆರೆ: ಸರ್ಕಾರ ರೈತರಿಂದ ಬೆಂಬಲ ಬೆಲೆಯಡಿ ಖರೀದಿಸಿದ ರಾಗಿ ಬಿಲ್ ಮೊತ್ತ ಸಕಾಲದಲ್ಲಿ ಪಾವತಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಘಟಕ ಪದಾಧಿಕಾರಿಗಳ ಜತೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಗೆ ತೆರಳಿ ಶಿರಸ್ತೇದಾರ್ ಕೆ.ಆರ್.ನೀಲಾಂಬಿಕೆಗೆ ಮನವಿ ಸಲ್ಲಿಸಿದರು.
ಸರ್ಕಾರ ಮಾರ್ಚ್‌ನಲ್ಲಿ ರಾಗಿ ಖರೀದಿ ಕೇಂದ್ರ ತೆರೆದು ತಾಲೂಕಿನ ಸಹಸ್ರಾರು ರೈತರಿಂದ ಕ್ವಿಂಟಾಲ್‌ಗಟ್ಟಲೇ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದೆ ಅದರೆ, ಈವರೆಗೆ ನಿಗದಿತ ಬಿಲ್ ಮೊತ್ತ ಪಾವತಿಸಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬರಗಾಲದ ಛಾಯೆಯಲ್ಲಿ ಜೀವನ ನಿರ್ವಹಣೆಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ತಕ್ಷಣ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸಿದ ರಾಗಿ ಬಿಲ್ ಮೊತ್ತವನ್ನು ಸಕಾಲದಲ್ಲಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಬಿಲ್ ಮೊತ್ತ ಪಾವತಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಮುಂದೆ ಈ ರೀತಿಯ ಸಮಸ್ಯೆ ಮರುಕಳಿಸದಂತೆ ಪರಿಹಾರ ಕಂಡು ಹಿಡಿಯಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಬಿಲ್ ಮೊತ್ತ ಪಾವತಿಸುವ ವಿಷಯದಲ್ಲಿ ವಿಳಂಬ ಧೋರಣೆ ಅಥವಾ ಬೇಜವಾಬ್ದಾರಿತನ ಪ್ರದರ್ಶಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಯುವ ಘಟಕ ಅಧ್ಯಕ್ಷ ಲೋಹಿತ್, ಆಟೋ ಚಾಲಕರ ಸಂಘದ ಅಧ್ಯಕ್ಷ ಧನಂಜಯ್, ಕಾರ್ಯದರ್ಶಿ ಅಖಿಲ್, ಸಹ ಕಾರ್ಯದರ್ಶಿ ಅನೂಪ್ ಮತ್ತಿತರರಿದ್ದರು.