ಶೃಂಗೇರಿಯ ಬಿಜಿಎಸ್ ಕಾಲೇಜು ಮತ್ತು ದರ್ಶಿನಿ ಸಂಯುಕ್ತ ಪ್ರೌಢಶಾಲೆಯಲ್ಲಿ ಶಾಲಾ ವಾಹನ ಚಾಲಕರಿಗೆ ಕಾನೂನು ಮತ್ತು ಮಕ್ಕಳ ಸುರಕ್ಷೆ ಕುರಿತು ಅರಿವು ಕಾರ್ಯಕ್ರಮವನ್ನು ಪ್ರಾಚಾರ್ಯ ಕೆ.ಸಿ.ನಾಗೇಶ್ ಉದ್ಘಾಟಿಸಿದರು. ಕಿರಣ್‌ಕುಮಾರ್, ಅಭಿಷೇಕ್ ಇದ್ದರು. 
ಚಿಕ್ಕಮಗಳೂರು

ಪಾಲಕರು ಮಕ್ಕಳ ಸುರಕ್ಷತೆಗೆ ಕಾಳಜಿ ವಹಿಸಲಿ

ಶೃಂಗೇರಿ: ಶಾಲಾ ಮಕ್ಕಳ ಸುರಕ್ಷಿತ ಪ್ರಯಾಣವು ಚಾಲಕರ ಗುರುತರ ಜವಾಬ್ದಾರಿ ಆಗಿದ್ದರೂ ಪಾಲಕರು ಮಕ್ಕಳ ಸುರಕ್ಷೆ ಕುರಿತು ಕಾಳಜಿ ವಹಿಸಬೇಕು. ಇಬ್ಬರ ನಡುವೆ ಸಹಕಾರ ಮತ್ತು ನಂಬಿಕೆ ಮಕ್ಕಳ ಸುರಕ್ಷತೆಗೆ ಅಡಿಪಾಯ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಭಿಷೇಕ್ ಹೇಳಿದರು.
 ಶೃಂಗೇರಿ ಬಿಜಿಎಸ್ ಕಾಲೇಜು ಹಾಗೂ ದರ್ಶಿನಿ ಸಂಯುಕ್ತ ಪ್ರೌಢಶಾಲೆ ಶಾಲಾ ವಾಹನ ಚಾಲಕರಿಗೆ ಭಾನುವಾರ ಕಾನೂನು ಮತ್ತು ಮಕ್ಕಳ ಸುರಕ್ಷತೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಾಲಕರು ನಿಗದಿತ ಸಮಯಕ್ಕೆ ಸರಿಯಾಗಿ ಬರಬೇಕು. ವಾಹನ ಬರುವುದು ತಡವಾದರೆ ಅಥವಾ ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಪಾಲಕರಿಗೆ ೆನ್ ಮೂಲಕ ತಿಳಿಸಬೇಕು. ಬೆಳಗ್ಗೆ ಶಾಲಾ ಮಕ್ಕಳು ವಾಹನ ಹತ್ತುವಾಗ ಮತ್ತು ಸಂಜೆ ಇಳಿಯುವಾಗ ಪಾಲಕರು ಇದ್ದರೆ ಸುರಕ್ಷೆಗೆ ಪೂರಕ. ಚಾಲಕರು ಕೇವಲ ವಾಹನ ಓಡಿಸುವ ಜತೆ ಪಾಲಕರೊಂದಿಗೆ ಭಾವನಾತ್ಮಕ ಸಂಬಂಧವಿರಿಸಿಕೊಂಡಾಗ ಮಕ್ಕಳ ಸುರಕ್ಷಿತ ಪ್ರಯಾಣ ಸಾಧ್ಯ ಎಂದರು.
ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಕೆ.ಸಿ.ನಾಗೇಶ್ ಮಾತನಾಡಿ, ನಿಗದಿಪಡಿಸಿದ ಸಮಯಕ್ಕಿಂತ ಐದು ನಿಮಿಷ ಮೊದಲೇ ಮಕ್ಕಳನ್ನು ಶಾಲೆಗೆ ಕರೆತರಬೇಕು. ಶಾಲಾ ವಾಹನಗಳಲ್ಲಿ ಜಿಪಿಎಸ್, ವೇಗ ನಿಯಂಂತ್ರಕ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಮಹಿಳಾ ಸಹಾಯಕರು ಇರಬೇಕು. ವಾಹನ ಚಲಿಸುವಾಗ ಕೈ ಮತ್ತು ತಲೆ ಹೊರಗೆ ಹಾಕಬಾರದು ಮತ್ತು ಚಾಲಕನಿಗೆ ತೊಂದರೆ ಕೊಡಬಾರದು ಎಂದು ಮಕ್ಕಳಿಗೆ ಮನೆಯಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ದರ್ಶಿನಿ ಸಂಯುಕ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣ್, ಬಿಜಿಎಸ್ ಸಂಸ್ಥೆಯ ಶಾಲಾ ವಾಹನಗಳ ಮೇಲ್ವಿಚಾರಕ ಮುಖರಾಮ್ ಪಾಷ, ವಾಹನ ಚಾಲಕರು, ಪಾಲಕರು ಉಪಸ್ಥಿತರಿದ್ದರು.