ಎನ್.ಆರ್.ಪುರ: ಬೇಲೂರಿನ 39 ಆನೆಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಓಡಿಸಲು ಸರ್ಕಾರ ನೀಡಿರುವ ಅದೇಶ ಹಿಂಪಡೆಯ ಬೇಕು ಎಂದು ಒತ್ತಾಯಿಸಿ ನ.30ರಂದು ಶ್ರೀ ಜ್ವಾಲಾಮಾಲಿನಿ ದೇವಾಲಯದಿಂದ ಸಂಗಮೇಶ್ವರಪೇಟೆ ಭದ್ರಾ ವೈಲ್ಡ್‌ಲ್ೈ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೆಮನೆ ವಿಶ್ವನಾಥ್ ಒತ್ತಾಯಿಸಿದರು.
ಎರಡು ದಿನ ಪಾದಯಾತ್ರೆ ನಡೆಸಿ ಸಂಗಮೇಶ್ವರಪೇಟೆ ವೈಲ್ಡ್‌ಲ್ೈ ಕಚೇರಿ ಎದುರು ಧರಣಿ ನಡೆಸಲಾಗುವುದು. ಅಂದು ಸಂಸದರು ಹಾಗೂ ಶಾಸಕರಿಬ್ಬರೂ ಆಗಮಿಸಬೇಕು. ಆನೆ ಬಂದ ದಾರಿಗೇ ಹಿಮ್ಮೆಟ್ಟಿಸುವ ಆದೇಶವನ್ನು ಲಿಖತವಾಗಿ ತರಬೇಕು. ಆನೆ ದಾಳಿ ತಡೆಗೆ ಶಾಶ್ವತ ಪರಿಹಾರಕ್ಕಾಗಿ ರೈಲ್ವೇ ಬ್ಯಾರಿಕೇಡ್ ಕಾಮಗಾರಿ ಪ್ರಾರಂಭಿಸುವ ಬಗ್ಗೆ ದಾಖಲೆ ಸಮೇತ ತಿಳಿಸಬೇಕು. ಸಂಸದರು ರಾಜ್ಯ ಸರ್ಕಾರದಿಂದ ಬರ್ ಜೋನ್ ಅಥವಾ ಇನ್ಯಾವುದೇ ಅರಣ್ಯಇಲಾಖೆ ಕಾಯ್ದೆಗಳ ಬಗ್ಗೆ ಸಲ್ಲಿಕೆಯಾದ ಕಡತಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಕ್ರಮವಹಿಸಬೇಕು. ಕೇವಲ ಭರವಸೆಗೆ ಬಗ್ಗಲ್ಲ, ಲಿಖಿತ ಅಧಿಕೃತ ಆದೇಶ ಪ್ರತಿ ಪ್ರತಿಭಟನೆ ಸ್ಥಳದಲ್ಲಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೆನ್ನಂಗಿಯಲ್ಲಿ ಆನೆ ದಾಳಿಗೆ ಕೃಷ್ಣಮೂರ್ತಿ ಮೃತಪಟ್ಟ ದಿನದಂದು ರಸ್ತೆ ತಡಿ ಮಾಡಿ, ಅನೇಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗಿತ್ತು. ಅಂದು ಶಾಸಕರು, ಹಿರಿಯ ಅಧಿಕಾರಿಗಳು ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಅದರೆ ಅಂದೇ ಬೇಲೂರಿನಿಂದ ಮೂಡಿಗೆರೆವರೆಗೆ ಆನೆ ಡ್ರೈವ್ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.
56 ಆನೆಗಳನ್ನು ತುರ್ತಾಗಿ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಆದೇಶ ಮಾಡಿಸಿದ ಕಾಳಜಿಯನ್ನು ಆನೆಗಳು ಬಂದ ಸ್ಥಳಕ್ಕೆ ಹಿಮ್ಮೆಟ್ಟಿಸಲು ಕಾಳಜಿ ತೋರಬೇಕು. ಆನೆಗಳು ರೈತರ ತೋಟ, ಜಮೀನುಗಳಿಗೆ ಬಾರದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ರೈಲ್ವೆ ಬ್ಯಾರಿಕೇಡ್ ನಿರ್ಮಿಸಿ ನಂತರ ಆನೆಗಳನ್ನು ಬಿಡಲಿ. ಈಗಾಗಲೇ 455ಕ್ಕೂ ಅಧಿಕ ಆನೆಗಳಿವೆ. ಇನ್ನೂ 56 ಆನೆಗಳನ್ನು ತಂದು ಬಿಟ್ಟರೆ ಆನೆಗಳು ಪಟ್ಟಣದೊಳಗೂ ಓಡಾಡುವಂತಾಗುತ್ತದೆ. ರೈತರ ಬದುಕು ಬೂರಾಬಟ್ಟೆಯಾಗಲಿದೆ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಂಚಿನಮನೆ, ತಾಲೂಕು ಅಧ್ಯಕ್ಷ ಕಿಬ್ಳಿ ಪ್ರದೀಪ್, ಕಾರ್ಯದರ್ಶಿ ಸಚಿನ್ ಇದ್ದರು.
ಹೋರಾಟದ ನಂತರ ರೈತರ ಕಣ್ಣೊರೆಸಲು ಜಿಲ್ಲೆಯ ಮೂರು ಶಾಸಕರು ರಾಜೀನಾಮೆ ಪ್ರಹಸನ ಮಾಡಿದರು. ಇವರ ರಾಜೀನಾಮೆಗೆ ಸರ್ಕಾರ ಕಿಮ್ಮತ್ತು ನೀಡಿಲ್ಲ. ಇವರು ರಾಜೀನಾಮೆ ನೀಡುವ ಹೇಳಿಕೆ ನೀಡಿದ ಮರುದಿನವೇ ಆನೆಗಳ ಸ್ಥಳಾಂತರಕ್ಕೆ ಮತ್ತೆ ಆದೇಶ ಹೊರಡಿಸಲಾಗಿದೆ. ಶಾಸಕರು ಈ ಪ್ರಹಸನಗಳನ್ನು ಬಿಟ್ಟು, ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ.ರಾಮಸ್ವಾಮಿ ಶೆಟ್ಟಿಗದ್ದೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಗೌರವಾಧ್ಯಕ್ಷ