ಬಾಳೆಹೊನ್ನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. ಮಹೇಶ್ ಆಚಾರ್ಯ, ಎಂ.ಎಸ್.ಜಯಪ್ರಕಾಶ್, ಕೌಶಿಕ್ ಪಟೇಲ್, ಲಿಲ್ಲಿ ಪಾಯ್ಸ ಇದ್ದರು. 
ಚಿಕ್ಕಮಗಳೂರು

ಸಂಘಟಿತರಾಗಿ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಯಶಸ್ವಿಗೊಳಿಸಿ

ಬಾಳೆಹೊನ್ನೂರು: ಬಾಳೆಹೊನ್ನೂರಿನ ಎಲ್ಲ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಕರೆ ನೀಡಿದರು.

27, 28ರಂದು ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆತಿಥ್ಯದಲ್ಲಿ ನಡೆಯುವ ಜಿಲ್ಲಾಮಟ್ಟದ 15, 17ರ ವಯೋಮಿತಿಯ ಬಾಲಕ, ಬಾಲಕಿಯರ ಅಥ್ಲೆಟಿಕ್ಸ್ ಕೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲಾಮಟ್ಟದ ಕ್ರೀಡಾಕೂಟ ನಡೆಸುವ ಆತಿಥ್ಯ ಒದಗಿರುವುದು ಕ್ಷೇತ್ರಕ್ಕೆ ಹೆಮ್ಮೆ. ಖರ್ಚು ವೆಚ್ಚಗಳ ಬಗ್ಗೆ ಸೂಕ್ತ ಆಯವ್ಯಯ ತಯಾರಿಸಿ ಅದರಂತೆ ಕಾರ್ಯಕ್ರಮ ನಡೆಸಬೇಕು ಎಂದರು.

ಸರ್ಕಾರದಿಂದ ಕ್ರೀಡಾಕೂಟಕ್ಕೆ ಅನುದಾನ ಲಭಿಸಲಿದ್ದು, ಇನ್ನುಳಿದ ಹಣವನ್ನು ಆಯ್ದ ದಾನಿಗಳಿಂದ ಆಯೋಜಕರು ಸಂಗ್ರಹಿಸಲು ಕ್ರಮಕೈಗೊಳ್ಳಬೇಕು. ನಾನು ಸಹ ಕ್ರೀಡಾಕೂಟಕ್ಕೆ ವೈಯಕ್ತಿಕವಾಗಿ ಧನ ಸಹಾಯ ಮಾಡುವುದಾಗಿ ತಿಳಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಮಾತನಾಡಿ, ಅ.27, 28ರಂದು ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದ್ದು, ಎರಡು ದಿನಗಳಲ್ಲಿ ಕ್ರೀಡಾಪಟುಗಳು, ಶಿಕ್ಷಕರು, ತೀರ್ಪುಗಾರರು ಸೇರಿ 4 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಕ್ರೀಡಾಕೂಟಕ್ಕೆ ಅಂದಾಜು 3 ಲಕ್ಷ ರೂ.ವೆಚ್ಚವಾಗಲಿದೆ. ಸರ್ಕಾರಿ ಪ್ರೌಢಶಾಲೆ ಆತಿಥ್ಯದಲ್ಲಿ ಈ ಹಿಂದೆ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಕ್ರೀಡಾಕೂಟಗಳನ್ನು ನಡೆಸಿದ ಅನುಭವವಿದ್ದು, ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವ ಭರವಸೆಯಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಜೆ.ಮಹೇಶ್ ಆಚಾರ್ಯ, ಸರ್ಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಪಿಸಿಎಆರ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಸ್.ಕೌಶಿಕ್ ಪಟೇಲ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಲಿಲ್ಲಿ ಪಾಯ್ಸ, ಪಿಡಿಒ ಕಾಶಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ರವಿಚಂದ್ರ, ಬಿ.ಕೆ.ಮಧುಸೂದನ್, ಪ್ರಮುಖರಾದ ಕೊಟ್ರೇಶಪ್ಪ, ಓ.ಡಿ.ಸ್ಟೀನ್, ಬಿ.ಎಚ್.ಮನುಕುಮಾರ್, ಹಿರಿಯಣ್ಣ, ಕಟ್ಟೇಗೌಡ, ಸುರೇಂದ್ರ, ತಮನ್ನಾ, ಸಿದ್ದರಾಜು ಮತ್ತಿತರರು ಇದ್ದರು.