ಕಡೂರು ತಾಲೂಕಿನ ಎಮ್ಮೆದೊಡ್ಡಿ ಭಾಗದ ಗ್ರಾಮಸ್ಥರು ಬಹಿರಂಗ ಸಭೆಗೆ ಆಗಮಿಸಿದ್ದರು. ಸಿ.ಸೋಮಶೇಖರ್, ಛಾಯಾಪತಿ, ಕೆ.ವೆಂಕಟೇಶ್ ರೆಡ್ಡಿ, ಆನಂದ್, ಕೆ.ಹನುಮಂತಪ್ಪ ಇತರರಿದ್ದರು.  
ಚಿಕ್ಕಮಗಳೂರು

ಅನುಸೂಚಿತ ಅರಣ್ಯ ಘೋಷಣೆಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಎಮ್ಮೆದೊಡ್ಡಿ ಅರಣ್ಯವಲ್ಲದ ಭಾಗ-2 ಸೇರ್ಪಡೆ ಬೇಡ
  • ಗ್ರಾಮಸ್ಥರ ಆಗ್ರಹ
ಕಡೂರು: ಎಮ್ಮೆದೊಡ್ಡಿ ಭಾಗದ ಮೀಸಲು ಅರಣ್ಯವಲ್ಲದ ಭಾಗ-2ರ ಪ್ರದೇಶವನ್ನು 1963ರ ಅರಣ್ಯ ಕಾಯ್ದೆಯಡಿ ಅನುಸೂಚಿತ ಅರಣ್ಯ ಪ್ರದೇಶವಾಗಿಸಲು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಅಧಿಕಾರಿಗಳು ಹಿಂಪಡೆಯಬೇಕು ಎಂದು ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಸಿ.ಸೋಮಶೇಖರ್ ಒತ್ತಾಯಿಸಿದರು.  
ಎಮ್ಮೆದೊಡ್ಡಿಯಲ್ಲಿ ಗುರುವಾರ ರೈತರ ಜತೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅರಣ್ಯ ವ್ಯವಸ್ಥಾಪನಾ(ಎ್ಎಸ್‌ಒ) ಅಧಿಕಾರಿಗಳು ಕರ್ನಾಟಕ ಅರಣ್ಯ ಕಾಯ್ದೆಯಡಿ ಎಮ್ಮೆದೊಡ್ಡಿ ಕಾವಲು ಗ್ರಾಮದ 13 ಸಾವಿರ ಎಕರೆ ಪ್ರದೇಶವನ್ನು ಎಮ್ಮೆದೊಡ್ಡಿ ಬ್ಲಾಕ್ ಮೀಸಲು ಅರಣ್ಯವಾಗಿ ರಚಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಮ್ಮೆದೊಡ್ಡಿ ಭಾಗ 1ರಲ್ಲಿ 8500 ಎಕರೆ ಪ್ರದೇಶವನ್ನು ಅರಣ್ಯ ಪ್ರದೇಶವಾಗಿ ಒಳಗೊಂಡಿದೆ. ಉಳಿದ ಮೀಸಲು ಅರಣ್ಯ ಪ್ರದೇಶವಲ್ಲದ 4500 ಸಾವಿರ ಎಕರೆ ಪ್ರದೇಶವನ್ನು ಅರಣ್ಯ ಪ್ರದೇಶವಾಗಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಆದೇಶ ಮಾಡಲು ಹೊರಟಿರುವ ಅಧಿಕಾರಿಗಳ ನಡೆಯಿಂದ ಈ ಭಾಗದ ರೈತರಿಗೆ ಮರಣ ಶಾಸನವಾಗಿ ಮಾರ್ಪಡಿಸಲಿದೆ. ಆದೇಶವಾಗುವ ವರದಿಯನ್ನು ಸರಿಪಡಿಸಿ ಎಮ್ಮೆದೊಡ್ಡಿ ಭಾಗ 1ರಲ್ಲಿಯೇ ಪೂರ್ಣ ಪ್ರಮಾಣದ ಮೀಸಲು ಅರಣ್ಯ ಪ್ರದೇಶವೆಂದು ಘೋಷಣೆಗೊಳ್ಳಬೇಕಿದೆ ಎಂಬುದು ರೈತರ ಆಗ್ರಹ ಎಂದರು.
ಸುತ್ತಮುತ್ತಲ ರೈತರು ಇಲ್ಲಿನ ನೆಲದೊಂದಿಗೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಬದುಕಿಗೆ ಅರಣ್ಯ ಇಲಾಖೆಯು ಭಾಗ-2ರ ಸಭಾ ನಡಾವಳಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಪರಿಣಾಮದಿಂದ ಇಲ್ಲಿನ ಗ್ರಾಮಗಳು ಕಂದಾಯ ಗ್ರಾಮವಾಗದೆ ಹಾಗೆಯೇ ಉಳಿಯುತ್ತವೆ. ಇದರಿಂದ ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಂಚಿತಗೊಳ್ಳಲಿದ್ದೇವೆ. ಹಲವಾರು ಸವಲತ್ತುಗಳು ದೊರೆಯದೆ ಸಮಸ್ಯೆಗಳು ಶಾಶ್ವತವಾಗಿಯೇ ಉಳಿಯಲಿವೆ. ಅವೈಜ್ಞಾನಿಕವಾದ ಎಮ್ಮೆದೊಡ್ಡಿ-ಭಾಗ 2ರ ನಡಾವಳಿ ಆದೇಶ ಮಾಡಲು ಮುಂದಾಗಿರುವ ವರದಿಯನ್ನು ಹಿಂಪಡೆದು ರೈತರ ಹಿತ ಕಾಪಾಡಬೇಕಿದೆ. ಈ ಕುರಿತು ಅಧಿಕಾರಿಗಳು ಮರುಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕಿದೆ. ಇಲ್ಲದಿದ್ದರೆ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಛಾಯಾಪತಿ ಮಾತನಾಡಿ, ಹಲವಾರು ವರ್ಷಗಳಿಂದ ಸಮಸ್ಯೆ ಎದುರಿಸಿಕೊಂಡು ಬರುತ್ತಿರುವ ಎಮ್ಮೆದೊಡ್ಡಿ ಭಾಗದ ರೈತರಿಗೆ ಅರಣ್ಯ ಕಾಯ್ದೆಯಡಿ ಅನುಷ್ಠಾನಗೊಳ್ಳುವ ಆದೇಶಗಳೇ ಬದುಕಿಗೆ ಮಾರಕವಾಗುತ್ತಿದ್ದು, ಇದರಿಂದ ಬದುಕಿನ ಆಸೆಯನ್ನೇ ಕಳೆದುಕೊಂಡಂತಾಗಿದೆ. ಅವೈಜ್ಞಾನಿಕವಾಗಿ ರೂಪಿತವಾಗಿರುವ ನಡಾವಳಿ ಆದೇಶವಾಗುವ ವರದಿಯನ್ನು ಹಿಂಪಡೆಯಬೇಕಿದೆ. ಇಲ್ಲಿನ ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜನಪ್ರತಿನಿಧಿಗಳು ಎಮ್ಮೆದೊಡ್ಡಿ ಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಈ ಭಾಗದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕಿದೆ ಎಂದರು.
 ರೈತ ಮುಖಂಡರಾದ ಕೆ.ವೆಂಕಟೇಶ ರೆಡ್ಡಿ, ಕೆ.ಹನುಮಂತಪ್ಪ, ಕುಮಾರನಾಯ್ಕ, ಮಂಜಭೋವಿ, ಗೋವಿಂದಪ್ಪ, ಚೇತನ್, ಆನಂದ್‌ಕುಮಾರ್ ಇತರರಿದ್ದರು.