ಹುಣಸಘಟ್ಟದಲ್ಲಿ ಒಲಿಂಪಿಯಾಡ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ, ಪಂಕಜಾ, ಸಂತೋಷ್, ನಾಗರತ್ನಾ, ಹರೀಶ್ ಇತರರಿದ್ದರು. 
ಚಿಕ್ಕಮಗಳೂರು

ಒಲಿಂಪಿಯಾಡ್ ಪರೀಕ್ಷೆಯಿಂದ ಆತ್ಮವಿಶ್ವಾಸ ವೃದ್ಧಿ

ಜಿ. ಗಜೇಂದ್ರ
ತರೀಕೆರೆ: ಒಲಿಂಪಿಯಾಡ್ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಸದಾಶಿವಗೌಡ ಹೇಳಿದರು.
ಹುಣಸಘಟ್ಟ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಒಲಿಂಪಿಯಾಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಒಲಿಂಪಿಯಾಡ್ ಪರೀಕ್ಷೆ ಬರೆಯುವುದರಿಂದ ಮಕ್ಕಳ ಭವಿಷ್ಯಕ್ಕೆ ನೆರವಾಗುವುದಲ್ಲದೆ ಜೆಇಇ, ನೀಟ್ ಇತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಉಪಯುಕ್ತವಾಗಲಿದೆ. ಕೌಶಲದ ಜತೆ ತಾರ್ಕಿಕ ಚಿಂತನೆಗೆ ಒಳಪಡಿಸುವ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಪ್ರತಿ ವಿದ್ಯಾರ್ಥಿಯೂ ಭಾಗವಹಿಸಬೇಕು ಎಂದರು.
ತಾಲೂಕು ಸಿಎಸ್‌ಸಿ ನೋಡಲ್ ಅಧಿಕಾರಿ ಪಂಕಜಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಣಿತ, ವೈಜ್ಞಾನಿಕ ಹಾಗೂ ತಾರ್ಕಿಕ ಕೌಶಲ ವೃದ್ಧಿಸುವ ಉದ್ದೇಶದಿಂದ ಒಲಿಂಪಿಯಾಡ್ ಪರೀಕ್ಷೆ ಆಯೋಜಿಸಲಾಗುತ್ತಿದೆ. ಮೂರನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿದ್ದು ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಇಂಗ್ಲಿಷ್, ಕಂಪ್ಯೂಟರ್ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಪರೀಕ್ಷೆ ಬರೆದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಸಾಬೀತುಪಡಿಸಬೇಕು ಎಂದರು. ಕೃಷಿ ಮೇಲ್ವಿಚಾರಕ ಸಂತೋಷ್, ಸೇವಾಪ್ರತಿನಿಧಿಗಳಾದ ನಾಗರತ್ನಾ, ಹರೀಶ್ ಮತ್ತಿತರರಿದ್ದರು.