ಕಡತಗಳ ವಿಲೇವಾರಿಗೆ ಒತ್ತಾಯಿಸಿ ರೈತ ಸಂಘದ ಉಪಾಧ್ಯಕ್ಷ ಎಂ.ಮಂಜುನಾಥಗೌಡ ಮೂಡಿಗೆರೆ ಭೂ ಮಾಪನ ಇಲಾಖೆ ಕಚೇರಿಯಲ್ಲಿ ಏಕಾಂಗಿ ಧರಣಿ ನಡೆಸಿದರು. 
ಚಿಕ್ಕಮಗಳೂರು

ರೈತರ ಕಡತ ವಿಲೇವಾರಿಗೆ ಅಧಿಕಾರಿಗಳ ನಿರ್ಲಕ್ಷೃ

ಮೂಡಿಗೆರೆ: ಭೂ ಮಾಪನಾ ಇಲಾಖೆ ಕಚೇರಿಗೆ ರೈತರು ಸಲ್ಲಿಸಿರುವ ಕಡತಗಳು ನನೆಗುದಿಗೆ ಬಿದ್ದಿದೆ. ಸಹಾಯಕ ನಿರ್ದೇಶಕರು ರಜೆ ಹಾಕಿ ಹೋದವರು ಹಿಂದಿರುಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸತ್ತು ರೈತ ಸಂಘದ ಉಪಾಧ್ಯಕ್ಷ ಎಂ.ಮಂಜುನಾಥಗೌಡ ಭೂ ಮಾಪನ ಇಲಾಖೆ ಕಚೇರಿಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು.
ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರೈತರ ಜಮೀನಿನ ಪಕ್ಕಾ ಪೋಡಿಗಾಗಿ ಅರ್ಜಿ ಸಲ್ಲಿಸಿದರೆ ಅರ್ಜಿಯನ್ನು ಇತ್ಯರ್ಥ ಪಡಿಸದಿರುವ ಅಧಿಕಾರಿಗಳ ಬೇಜವಾಬ್ದಾರಿತನ ವಿರೋಧಿಸಿ ಅ.3ರಂದು ರೈತರು ನೇಗಿಲು, ನೂಗ ಹೊತ್ತು, ತಮಟೆ ಬಾರಿಸುವ ಮೂಲಕ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ಪ್ರತಿಭಟಿನೆ ನಡೆಸಿದಾಗ, ತಹಸೀಲ್ದಾರ್ ಎಸ್.ಅಶ್ವಿನಿ ಹಾಗೂ ಭೂಮಾಪನಾ ಇಲಾಖೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಎಲ್ಲ ಅರ್ಜಿಗಳನ್ನು ಶೀಘ್ರ ವಿಲೇ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಒಂದು ತಿಂಗಳು ಕಳೆದರೂ ವಿಲೇ ಮಾಡಿಲ್ಲ ಎಂದು ದೂರಿದರು.
ಸರ್ವೇ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಅವರು 6 ತಿಂಗಳ ಹಿಂದೆ ರಜೆ ಹಾಕಿ ಹೋಗಿದ್ದರು. ರಜೆಯಲ್ಲಿದ್ದಾಗಲೇ ನಿವೃತ್ತರಾಗಿದ್ದಾರೆ. ಮಹಾದೇವಪ್ಪ ಅವರ ಜಾಗಕ್ಕೆ ಬೇರೆ ಅಧಿಕಾರಿಯನ್ನು ಈಗ ಸರ್ಕಾರ ನೇಮಿಸಿದೆ. ಹಿಂದಿನ ಅಧಿಕಾರಿ ರಜೆಯಲ್ಲಿದ್ದಾಗ ನಿವೃತ್ತರಾಗಿದ್ದರಿಂದ ಈಗ ಕರ್ತವ್ಯದಲ್ಲಿರುವ ಅಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಆಡಳಿತ್ಮಾಕ ದೋಷ ಉಂಟಾಗಿದೆ. ಈಗಿನ ಅಧಿಕಾರಿ ಹಳೆ ಕಡತಕ್ಕೆ ಸಹಿ ಹಾಕುವಂತಿಲ್ಲ. ಅಧಿಕಾರಿ ಸಹಿಯಿಲ್ಲದೆ ಯಾವುದೇ ಕಡತ ವಿಲೇ ಮಾಡಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಭೂ ಮಾಪನ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪಕ್ಕಾ ಪೋಡಿಗಾಗಿ ಕೆಲ ರೈತರ ಜಮೀನಿನ ಸರ್ವೆ ಕಾರ್ಯ ನಡೆದು 2 ತಿಂಗಳು ಕಳೆದರೂ ನಕಾಶೆ ತಯಾರಿಸಿಲ್ಲ. 2 ತಿಂಗಳಿನಿಂದ ಸರ್ವೆ ನಡೆಸಿದ ಕಡತ ಕಚೇರಿಯಲ್ಲಿ ಕೊಳೆಯುತ್ತಿದೆ. ಸಕಾಲ ಯೋಜನೆಯೆಲ್ಲಿ ಕಡತ ಮುಂದುವರಿಸಿದ್ದರೆ ತಾಲೂಕು ಕಚೇರಿ ಪಹಣಿಯಲ್ಲಿ ಇ ದೃಢಿಕರಣ ಆಗುತ್ತಿತ್ತು. 2 ತಿಂಗಳು ಕಡತ ವಿಲೇ ಮಾಡದೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ ರೈತರು ಸರ್ವೆ ಕಚೇರಿಗೆ ಅಲೆದು ಸಾಕಾಗಿದೆ.
ಪಕ್ಕಾ ಪೋಡಿಗಾಗಿ ಕೆಲ ರೈತರ ಜಮೀನಿನ ಸರ್ವೆ ಕಾರ್ಯ ನಡೆದು 2 ತಿಂಗಳು ಕಳೆದರೂ ನಕಾಶೆ ತಯಾರಿಸಿಲ್ಲ. ರೈತರು ಕೇಳಿದರೆ ಅಧಿಕಾರಿಗಳಿಂದ ನಾಳೆ ಬನ್ನಿ ಎಂಬ ಉತ್ತರ ಮಾತ್ರ ಸಿಗುತ್ತದೆ. ರೈತರ ಕಡತಗಳನ್ನು ವಿಲೇವಾರಿ ಮಾಡದೆ ತಿಂಗಳುಗಟ್ಟಲೆ ಕಚೇರಿಯಲ್ಲಿ ಇಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ವಿರೋಧಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಶಾಸಕಿ ನಯನ ಮೋಟಮ್ಮ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಭೂ ಮಾಪನ ಇಲಾಖೆ ಜಂಟಿ ನಿರ್ದೇಶಕರ ಗಮನಕ್ಕೆ ತಂದರೂ ರೈತರ ಕಡತಗಳನ್ನು ಅಧಿಕಾರಿಗಳು ವಿಲೇ ಮಾಡುತ್ತಿಲ್ಲ ಎಂದು ದೂರಿದರು.