ಎಸ್.ಮಾದಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ಸಿ.ಎಸ್.ಪೂರ್ಣಿಮಾ, ಪಂಚನಹಳ್ಳಿ ಪ್ರಸನ್ನ, ಸಿ.ಆರ್.ಪ್ರವೀಣ್, ಅಬಿದ್ ಪಾಷಾ, ಕಲ್ಲೇಶ್ ಇದ್ದರು. 
ಚಿಕ್ಕಮಗಳೂರು

ಇ-ಸ್ವತ್ತು ನೀಡಲು ಅಧಿಕಾರಿಗಳಿಂದ ಕಾನೂನಿನ ನೆಪ

ಕಡೂರು: ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಕಷ್ಟು ಮನೆಗಳಿಗೆ ಇ-ಸ್ವತ್ತು ದೊರಕುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಎಲ್ಲದಕ್ಕೂ ಕಾನೂನು ನಿಯಮಗಳನ್ನು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ಅಳಲುತೋಡಿಕೊಂಡರು.

ಎಸ್.ಮಾದಾಪುರದಲ್ಲಿ ನಡೆದ ಸಿಂಗಟಗೆರೆ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನದ ಸಭೆಯಲ್ಲಿ ಮಾತನಾಡಿ, ಗ್ರಾಮಸ್ಥರು ಸಿದ್ಧರಾಮನಹಳ್ಳಿ, ಮಾದಾಪುರ, ರಂಗಾಪುರ ವ್ಯಾಪ್ತಿಯ ಗ್ರಾಮಠಾಣಾ ಜಾಗದಲ್ಲಿದ್ದರೂ ಕೂಡ ಇ-ಸ್ವತ್ತು ದೊರಕುತ್ತಿಲ್ಲ ಎಂದು ದೂರಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಮಧು ಮಾತನಾಡಿ, ಎಸ್.ಮಾದಾಪುರ ಗ್ರಾಮದಲ್ಲೇ ಸಾಕಷ್ಟು ಮನೆಗಳ ಹಕ್ಕುಪತ್ರ ಪಡೆದುಕೊಂಡ ಬಹುತೇಕ ನಿವೇಶನದಾರರಿಗೆ ಇ-ಸ್ವತ್ತು ಲಭ್ಯವಾಗುತ್ತಿಲ್ಲ. ನಿಯಮ ಮಾರ್ಪಡಿಸಿಕೊಂಡು ಇ-ಸ್ವತ್ತು ದೊರಕಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ ಕುಡಿಯುವ ನೀರು, ಕೆರೆಗಳ ಒತ್ತುವರಿ ತೆರವು ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ತೊಂದರೆಯಾಗಿದೆ.ಕೋಳಿ ತ್ಯಾಜ್ಯದಿಂದ ಕೆರೆ ನೀರು ಕಲುಷಿತಗೊಳ್ಳುತ್ತಿವೆ. ಸುತ್ತಲು ಫೆನ್ಸಿಂಗ್ ಹಾಕಿ ವಾಕಿಂಗ್ ಪಾತ್ ನಿರ್ಮಾಣ ಮಾಡಬೇಕು ಹಾಗೂ ಕೆರೆಗೆ ಬರುವ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಚರಂಡಿ ನೀರು ಕೆರೆಗೆ ಸೇರುವುದನ್ನು ತಡೆದು ನೀರು ಹೊರ ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಈ ಹಿಂದೆ ನಡೆದ ಪಂಚಾಯಿತಿ ಮಟ್ಟದ ಗ್ರಾಮ ಸಭೆಗಳಲ್ಲಿ ಇ-ಸ್ವತ್ತು ಸಿಗದ ಫಲಾನುಭವಿಗಳ ಪಟ್ಟಿಯನ್ನು ಪಟ್ಟಿ ಮಾಡಿ ಇ-ಸ್ವತ್ತು ನೀಡುವಂತೆ ಈಗಾಗಲೇ ಸೂಚನೆ ನೀಡಿದರೂ ಎಸ್.ಮಾದಾಪುರ ಗ್ರಾಪಂ ವ್ಯಾಪ್ತಿಯ ಪಿಡಿಒ ಸೇರಿದಂತೆ ವಿವಿಧ ಇಲಾಖೆ ನಿರ್ಲಕ್ಷ್ಯದಿಂದ ಅನೇಕ ನಿವೇಶನದಾರರಿಗೆ ಇ-ಸ್ವತ್ತು ಸಿಕ್ಕಿಲ್ಲ. ಎಲ್ಲದಕ್ಕೂ ಕಾನೂನು ಕ್ರಮ ಹೇಳಿಕೊಂಡರೆ ನಿವೇಶನದಾರರ ಕಥೆ ಏನು? ತಮ್ಮ ಪರಿಮಿತಿಯಲ್ಲಿ ಮಾನವೀಯತೆಯಿಂದ ಸಾರ್ವಜನಿಕರ ಕೆಲಸಗಳನ್ನು ಮಾಡಿ ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಾಕೀತು ಮಾಡಿದರು.

ಇಂದಿರಾ ಕ್ಯಾಂಟಿನ್ ಮೇಲುಸ್ತುವಾರಿ ಸಮಿತಿ ರಾಜ್ಯಾಧ್ಯಕ್ಷ ಪಂಚನಹಳ್ಳಿ ಪ್ರಸನ್ನ ಮಾತನಾಡಿ, ಶಾಸಕ ಆನಂದ್ ಅವರು ತಮ್ಮ ಯೋಚನಾ ಶಕ್ತಿಯಿಂದ ಕ್ಷೇತ್ರದ 25 ಗ್ರಾಪಂಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿದ್ದರಿಂದ ಶೇ.60ರಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಸಾಧ್ಯವಾಗಿದೆ ಎಂದರು.

ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಗ್ರಾಪಂ ಆಡಳಿತಾಧಿಕಾರಿ ಕಲ್ಲೇಶ್, ಗ್ಯಾರಂಟಿ ಸಮಿತಿ ನಿರ್ದೇಶಕ ಅಬಿದ್ ಪಾಷಾ ಮತ್ತಿತರರು ಇದ್ದರು.

ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಇ-ಸ್ವತ್ತಿನ ವಿಚಾರದಲ್ಲಿ ಸರಣಿ ಸಭೆ ನಡೆಸಲಾಗಿದೆ. ಸರ್ಕಾರದ ನಿರ್ದೇಶನದೊಂದಿಗೆ ನವೆಂಬರ್ ತಿಂಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಅಭಿಯಾನವನ್ನು ಹಮ್ಮಿಕೊಂಡು ದೊರಕಿಸಿಕೊಡಲಾಗುವುದು.
ಸಿ.ಆರ್.ಪ್ರವೀಣ್ ತಾಪಂ ಇಒ