ಅಬ್ದುಲ್ ಸುಬಾನ್ 
ಚಿಕ್ಕಮಗಳೂರು

ಸಂತೆ ದಿನ ರಸ್ತೆ ಬದಿ ವ್ಯಾಪಾರ ನಿಷೇಧಕ್ಕೆ ಆಕ್ಷೇಪ

ಎನ್.ಆರ್.ಪುರ: ಪಟ್ಟಣದಲ್ಲಿ ಸಂತೆ ನಡೆಯುವ ಶನಿವಾರ ಮುಖ್ಯರಸ್ತೆ ಬದಿಯಲ್ಲಿ ವಾಹನಗಳಲ್ಲಿ ಹಣ್ಣಿನ ಮಾರಾಟ ನಿಷೇಧಿಸಿರುವ ಕುರಿತು ಪಪಂ ಆಡಳಿತಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಉತ್ತರ ನೀಡಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಬ್ದುಲ್‌ಸುಬಾನ್ ತಿಳಿಸಿದರು.
ಸಂತೆ ದಿನವಾದ ಶನಿವಾರ ಬಿಇಒ ಕಚೇರಿ ಸಮೀಪದಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹತ್ತಿರದವರೆಗೆ ರಸ್ತೆ ಒಂದು ಬದಿಯಲ್ಲಿ ಹಣ್ಣಿನ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಂತೆ ದಿನ ಏಕಾಏಕಿ ಹಣ್ಣಿನ ಅಂಗಡಿ ಇಡುವುದನ್ನು ನಿಷೆೇಧಿಸಿರುವ ಹಿಂದಿನ ಉದ್ದೇಶವೇನು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸಂತೆ ದಿನ ರಸ್ತೆ ಬದಿಯಲ್ಲಿ ಹಣ್ಣು ಮಾರಾಟ ಮಾಡಿದರೆ ಸಂಚಾರ ದಟ್ಟಣೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುವುದಾದರೆ ವಾಹನ ನಿಲುಗಡೆಗೆ ಪೊಲೀಸ್ ಇಲಾಖೆ ಪರ್ಯಾಯ ಸ್ಥಳ ನಿಗದಿ ಮಾಡಬೇಕು. ಬೀದಿ ಬದಿಯ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಗುರುತಿನ ಚೀಟಿ ನೀಡಿ ಸಾಲ ಸೌಲಭ್ಯ ನೀಡಿದೆ. ಆದರೆ ಬೀದಿ ಬದಿಯಲ್ಲಿ ಮಾರಾಟ ಮಾಡಲು ಬಿಡದೆ ಪಟ್ಟಣ ಪಂಚಾಯಿತಿ ಮತ್ತು ಪೊಲೀಸರು ತೊಂದರೆ ಕೊಡುತ್ತಿರುವುದು ಸರಿಯಲ್ಲ ಎಂದು ದೂರಿದರು.
ರಸ್ತೆ ಬದಿ ಹಣ್ಣು ಮಾರಾಟ ಮಾಡುವುದನ್ನು ನಿಷೇಧಿಸಿರುವ ಪಪಂ ಮತ್ತು ಪೊಲೀಸರ ವಿರುದ್ಧ ಜೆಡಿಎಸ್‌ನಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಸಮಸ್ಯೆ ಬಗೆಹರಿಸದಿದ್ದರೆ ಸಂಬಂಧಪಟ್ಟ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಿಗದಿತ ಸಮಯದೊಳಗೆ ನಡೆಸಬೇಕು. ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಮುಗಿಯುವ ಮುನ್ನವೇ ಮೀಸಲಾತಿ ಪ್ರಕಟಿಸಿದರೆ ಅನ್ಯಾಯವಾಗಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿರುತ್ತದೆ. ಸಮಸ್ಯೆ ಬೇಗ ಬಗೆಹರಿಸಿ ನಿಗದಿತ ಸಮಯದೊಳಗೆ ಚುನಾವಣೆ ನಡೆಸಲು ಅವಕಾಶವಾಗುತ್ತದೆ. ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಿದರೆ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಬಗೆಹರಿಸಲು ಸಹಾಯಕವಾಗುತ್ತದೆ ಎಂದರು. ಜೆಡಿಎಸ್ ಮುಖಂಡ ಸತ್ಯನಾರಾಯಣ ಶ್ರೇಷ್ಠಿ, ವಕ್ತಾರ ಸತೀಶ್, ನವೀನ್ ಇದ್ದರು.