ಬೀರೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದಲ್ಲಿ ಪಿಎಸ್‌ಐ ಡಿ.ವಿ.ತಿಪ್ಪೇಶ್ ಮಾತನಾಡಿದರು. ಚಂದ್ರಶೇಖರ್, ಪಾಂಡುರಂಗಪ್ಪ, ಶಿವಾನಂದ, ಚಂದ್ರನಾಯ್ಕ ಇದ್ದರು.
ಬೀರೂರು: ರಸ್ತೆಯಲ್ಲಿ ಅಪಘಾತಗಳು ವಾಹನಗಳ ಅಜಾಗರೂಕತೆ ಮತ್ತು ಅತಿವೇಗದಿಂದ ಉಂಟಾಗುತ್ತದೆ. ರಸ್ತೆ ನಿಯಮವನ್ನು ಪ್ರತಿಯೊಬ್ಬರು ಪಾಲನೆ ಮಾಡುವುದರಿಂದ ಅಪಘಾತಗಳ ಪ್ರಮಾಣ ಕಡಿಮೆ ಮಾಡಬಹುದು ಎಂದು ಪಿಎಸ್‌ಐ ಡಿ.ವಿ.ತಿಪ್ಪೇಶ್ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಆಟೋ ನಿಲ್ದಾಣಗಳಲ್ಲಿ ಪೊಲೀಸ್ ಇಲಾಖೆಯಿಂದ ಸೋಮವಾರ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ವರದಿಯಾಗಿರುವ ಸಾವಿನ ಸಂಖ್ಯೆಗಳಲ್ಲಿ ಹೆಚ್ಚಿನ ಭಾಗ ಅಪಘಾತಗಳದ್ದೇ ಆಗಿದೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು, ಸೀಟ್ ಬೆಲ್ಟ್ ಧರಿಸದೆ ಕಾರುಗಳ ಚಾಲನೆ, ಮದ್ಯಪಾನ ಮಾಡಿ ಹಾಗೂ ನಿದ್ದೆಗೆಟ್ಟು ವಾಹನಗಳ ಚಾಲನೆ ಮಾಡುವುದರಿಂದ ಜೀವಕ್ಕೆ ಹಾನಿ ತರಬಹುದು. ಅಲ್ಲದೆ ಅಪ್ರಾಪ್ತರ ಚಾಲನೆಯಿಂದ ಪಾಲಕರಿಗೆ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ. ಪಾದಾಚಾರಿಗಳು ಬೇಕಾಬಿಟ್ಟಿ ರಸ್ತೆಗಳನ್ನು ದಾಟುವ ಪ್ರಯತ್ನ ಮಾಡಬಾರದು ಎಂದರು.
ವಾಹನಗಳ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಅಪಘಾತಗಳು ಸಂಭವಿಸಿದಾಗ ವಾಹನಗಳ ಎಫ್.ಸಿ, ಡಿಎಲ್, ಇನ್ಶೂರೆನ್ಸ್, ಹೊಗೆ ತಪಾಸಣೆಯಂತಹ ದಾಖಲೆಗಳು ಕಡ್ಡಾಯವಾಗಿರುತ್ತವೆ. ಪ್ರತಿಯೊಬ್ಬರೂ ರಸ್ತೆ ನಿಯಮವನ್ನು ಪಾಲಿಸಬೇಕು ಎಂದರು.
ಎಎಸ್‌ಐ ಚಂದ್ರಶೇಖರ್, ಕಾನ್ಸ್‌ಸ್ಟೇಬಲ್‌ಗಳಾದ ಪಾಂಡುರಂಗಪ್ಪ, ಶಿವಾನಂದ, ಚಾಲಕರಾದ ಚಂದ್ರನಾಯ್ಕ ಇದ್ದರು.