ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಎಸ್ಸಿ, ಎಸ್ಟಿ ಪಂಗಡದ ಕುಂದು ಕೊರತೆ ಸಭೆ ನಡೆಯಿತು. 
ಚಿಕ್ಕಮಗಳೂರು

ಎಸ್ಟಿ, ಎಸ್ಟಿ ಕುಂದು ಕೊರತೆ ಸಭೆಗೆ ಗೈರಾದವರಿಗೆ ನೋಟಿಸ್

ಎನ್.ಆರ್.ಪುರ: ತಾಲೂಕು ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ಡಾ. ನೂರುಲ್‌ಹುದಾ ಸೂಚಿಸಿದರು.
ಸಭೆಗೆ ಹಲವು ಇಲಾಖೆ ಅಧಿಕಾರಿಗಳು ಗೈರಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು. ಇನ್ನು ಮುಂದಿನ ಸಭೆಯಲ್ಲಿ ಆಯಾ ಇಲಾಖೆ ಅಧಿಕಾರಿಗಳು ಹಾಜರಾಗಬೇಕು. ಪ್ರತಿನಿಧಿಗಳನ್ನು ಕಳಿಸುವಂತಿಲ್ಲ ಎಂದು ಆದೇಶಿಸಿದರು.
ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ಹಿಂದಿನ ಸಭೆಯಲ್ಲಿ ನಾನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆ ಜಮೀನುಗಳನ್ನು ವಾಪಸ್ ನೀಡಿದ ಬಗ್ಗೆ ಪ್ರಸ್ತಾಪ ಮಾಡಿದಾಗ, ಈ ಬಗ್ಗೆ ಜಂಟಿ ಸರ್ವೇ ಮಾಡಿಸಿ ಕಂದಾಯ ಜಾಗವನ್ನು ಗುರುತಿಸಿ ಒತ್ತುವರಿ ಮಾಡಿಕೊಂಡಿರುವ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಬಗ್ಗೆ ಕ್ರಮಕೈಗೊಂಡ ಮಾಹಿತಿ ನೀಡುವಂತೆ ತಿಳಿಸಿದರು.
ಎಸ್‌ಐಟಿ ಪರಿಶೀಲನೆ ಅರಣ್ಯ ಮತ್ತು ಕಂದಾಯ ಇಲಾಖೆ ಅಡಿಯಲ್ಲಿ ಜಂಟಿ ಮೋಜಣಿ ಕಾರ್ಯ ಪ್ರಗತಿಯಲ್ಲಿದ್ದು ನಂತರ ಸಮಸ್ಯೆ ಬಗೆಹರಿಸಲಾಗುವುದು ತಹಸೀಲ್ದಾರ್ ಉತ್ತರಿಸಿದರು. ಇದಕ್ಕೆ ತೃಪ್ತರಾಗದ ಮಂಜುನಾಥ್ ಎಸ್‌ಐಟಿಗೂ, ಜಮೀನು ಮಂಜೂರಾತಿಗೂ ಯಾವುದೇ ಸಂಬಂಧವಿಲ್ಲ. ಅಕ್ರಮ ಸಕ್ರಮದಡಿ ಸಲ್ಲಿಕೆಯಾದ ಅರ್ಜಿಗಳಿಗೆ ಕಾಯ್ದೆ 64 (ಎ) ಅಡಿ ಅರಣ್ಯಇಲಾಖೆ ಒಪ್ಪಿಗೆ ಪಡೆದು ಜಮೀನು ಮಂಜೂರು ಮಾಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿಲ್ಲ, ಹೊರಡಿಸಿದ್ದರೆ ಸುತ್ತೋಲೆ ಪ್ರತಿ ನೀಡಬೇಕು ಎಂದು ಆಗ್ರಹಿಸಿದರು.