ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು 
ಚಿಕ್ಕಮಗಳೂರು

೧೦ ದಿನದಲ್ಲಿ ಪರಿಹಾರ ವಿತರಣೆಗೆ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
  • ಮೂಗ್ತಿಹಳ್ಳಿಯಿಂದ ಮೂಡಿಗೆರೆ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ ೧೭೩ರ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ನಿಂದ ಮೂಗ್ತಿಹಳ್ಳಿವರೆಗಿನ ಸುಮಾರು ೨೬ ಕಿ.ಮೀ. ರಸ್ತೆ ಅಗಲೀಕರಣ ಹಾಗೂ ಕಾಮಗಾರಿ ಪ್ರಗತಿಗೆ ಎದುರಾಗಿರುವ ಭೂಸ್ವಾಧೀನ ಪ್ರಕ್ರಿಯೆಯ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈ ಹೆದ್ದಾರಿ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಒಟ್ಟು ೧೨೦ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗಿದೆ. ಈ ಪೈಕಿ ಈಗಾಗಲೇ ೪೪ ಜನರಿಗೆ ಯಶಸ್ವಿಯಾಗಿ ಪರಿಹಾರದ ಹಣವನ್ನು ವಿತರಿಸಲಾಗಿದೆ. ಸುಮಾರು ೬೦ ಸಂತ್ರಸ್ತರು ಅಗತ್ಯ ದಾಖಲೆಗಳನ್ನು ಇನ್ನೂ ಸಲ್ಲಿಸಬೇಕಾಗಿದೆ. ಇನ್ನುಳಿದ ೩೨ ಜನರಿಗೆ ಒಟಿಪಿ ಸಮಸ್ಯೆಯಿಂದಾಗಿ ಪರಿಹಾರದ ಹಣ ವಿತರಣೆ ಬಾಕಿ ಉಳಿದಿದ್ದು, ತಾಂತ್ರಿಕ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದಾಖಲೆಗಳನ್ನು ಸಲ್ಲಿಸುವ ರೈತರು ಹಾಗೂ ಸಂತ್ರಸ್ತರಿಗೆ ಮುಂದಿನ ೧೦ ದಿನಗಳ ಒಳಗೆ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮೆ ಮಾಡಬೇಕು. ಆಧಾರ್ ಕಾರ್ಡ್ ಅಥವಾ ಒಟಿಪಿ ಲಿಂಕ್ ಸಮಸ್ಯೆ ಇರುವ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಹತ್ತು ದಿನಗಳಲ್ಲಿ ಸರಿಪಡಿಸಬೇಕು ಎಂದರು.
ನಿಗದಿತ ೧೦ ದಿನಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸಲು ವಿಫಲರಾಗುವ ಅಥವಾ ತಾಂತ್ರಿಕ ಕಾರಣಗಳಿಂದ ವಿಳಂಬವಾಗುವ ಪ್ರಕರಣಗಳ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿ, ಕಾಮಗಾರಿಯನ್ನು ಯಾವುದೇ ಅಡೆತಡೆಯಿಲ್ಲದೆ ತಕ್ಷಣವೇ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ವಿಳಂಬ ಧೋರಣೆಯಿಂದ ಅಭಿವೃದ್ಧಿ ಕಾಮಗಾರಿಗಳು ತಡವಾಗಬಾರದು. ಈ ನಿಟ್ಟಿನಲ್ಲಿ ಮುಂದಿನ ೧೦ ದಿನಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದರೆ ಶೇ.೯೦ರಷ್ಟು ಕೆಲಸಗಳು ಪೂರ್ಣಗೊಂಡಂತಾಗುತ್ತದೆ. ಇದರಿಂದ ರಸ್ತೆ ಬದಿಯ ಮರಗಳನ್ನು ಕಡಿಯಲು ಹಾಗೂ ಜಾಗ ಗುರುತಿಸಲು ಸುಲಭವಾಗುತ್ತದೆ ಎಂದು ಸಂಸದರು ತಿಳಿಸಿದರು.
ಬೆಂಗಳೂರಿನ ಪ್ರಾದೇಶಿಕ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದ್ದು, ಅತ್ಯಂತ ವೇಗವಾಗಿ ಮೂಡಿಗೆರೆ-ಮೂಗ್ತಿಹಳ್ಳಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪವಿಭಾಗಾಧಿಕಾರಿ ನಟೇಶ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.