ಎನ್.ಆರ್.ಪುರ ಮೆಸ್ಕಾಂ ಎಇಇ ಗೌತಮ್‌ಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ವಿಶ್ವನಾಥ್ ಗದ್ದೆಮನೆ, ರಾಘವೇಂದ್ರ ಹಂಚಿನಮನೆ, ಕೋಕಿಲಮ್ಮ, ದಬ್ಗುಣಿ ಜಯರಾಂ, ಮುರಳಿ, ವಿಕಾಸ್, ಪ್ರದೀಪ ಇತರರಿದ್ದರು. 
ಚಿಕ್ಕಮಗಳೂರು

ಖಾಸಗೀಕರಣ ಬೇಡ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ
  • ಸರ್ಕಾರಕ್ಕೆ ಮನವಿ
  • . ಖಾಸಗಿ ಕಂಪನಿಗಳು
  • ಕೂಲಿ ಕಾರ್ಮಿಕರಿಗೆ
ಎನ್.ಆರ್.ಪುರ: ವಿದ್ಯುತ್ ವಿತರಣಾ ಕಂಪನಿಗಳು ರಾಜ್ಯ ಸರ್ಕಾರದ ಅಧೀನದಲ್ಲಿಯೇ ಕಾರ್ಯನಿರ್ವಹಿಸುವಂತೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಮೆಸ್ಕಾಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 
ವಿದ್ಯುತ್ ವಿರತಣಾ ಕೇಂದ್ರಗಳನ್ನು ಖಾಸಗೀಕರಣ ಮಾಡುವುದರಿಂದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಸರಿಯಾದ ಸಮಯಕ್ಕೆ ನಿರ್ವಹಿಸುವುದಿಲ್ಲ. ಕಂಬಗಳ ನಿರ್ವಹಣೆಯಲ್ಲಿ ವಿಳಂಬವಾಗಬಹುದು. ಖಾಸಗಿ ಕಂಪನಿಗಳು ತಮಗಾಗುವ ವಿದ್ಯುತ್ ಮಾರ್ಗದ ನಷ್ಟವನ್ನು ಹಾಗೂ ವೀಲಿಂಗ್ ಮುಖಾಂತರ ಬರುವ ವೆಚ್ಚವನ್ನು ನೇರವಾಗಿ ಗ್ರಾಹಕರ ಮೇಲೆ ಹೊರೆ ಹೊರೆಸಲು ಕಾರಣವಾಗುತ್ತದೆ ಎಂದರು.
ಸಾರ್ವಜನಿಕ ವಿದ್ಯುತ್ ದರವು ಪ್ರಸ್ತುತ ಮೊತ್ತಕ್ಕಿಂತ ಮೂರರಿಂದ ನಾಲ್ಕು ಪಟ್ಟು ಏರಿಕೆ ಮಾಡುವ ಸಾಧ್ಯತೆಗಳಿವೆ. ಇದರಿಂದ ರೈತರಿಗೆ, ಕೂಲಿ ಕಾರ್ಮಿಕರಿಗೆ ವಿದ್ಯುತ್ ಬಳಕೆ ದುಬಾರಿಯಾಗಲಿದೆ. ರೈತರಿಗೆ ನೀಡುವ ವಿವಿಧ ಸೌಲಭ್ಯಗಳಿಗೆ ಧಕ್ಕೆಯಾಗಲಿದೆ. ವಿದ್ಯುತ್ ದರ ಏರಿಕೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಎಲ್ಲ ಸಾಮಗ್ರಿಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಲಿವೆ ಎಂದರು.
ಖಾಸಗಿ ಸಂಸ್ಥೆಯವರು ಲಾಭದಾಯಕ ಹಿತಾಸಕ್ತಿಗೆ ಕಂಪನಿ ನಡೆಸುತ್ತಾರೆಯೇ ವಿನಃ ಜನಸಾಮಾನ್ಯರ ಹಿತಾಸಕ್ತಿ ಬಯಸುವುದಿಲ್ಲ. ವಿದ್ಯುತ್ ಕ್ಷೇತ್ರದಲ್ಲಿ ರಾಜ್ಯದಲ್ಲಿ ಸುಮಾರು 60 ಸಾವಿರ ನೌಕರರಿದ್ದು ಇವರ ಸೇವಾ ಭದ್ರತೆಗೆ ಧಕ್ಕೆಯಾಗಲಿದೆ. ಖಾಸಗೀಕರಣವಾದಲ್ಲಿ ಜನಸಾಮಾನ್ಯರು ದುಬಾರಿ ವೆಚ್ಚವನ್ನು ಭರಿಸಿ ವಿದ್ಯುತ್ ಸಂಪರ್ಕ ಪಡೆಯುವುದು ಕಷ್ಟವಾಗುತ್ತದೆ. ವಿದ್ಯುತ್ ಕ್ಷೇತ್ರವು ರಾಜ್ಯ ಸರ್ಕಾರದ ಮತ್ತು ಸಾರ್ವಜನಿಕ ನಿಯಂತ್ರಣದಲ್ಲಿರುವುದರಿಂದ ಗ್ರಾಹಕರ ಸಮಸ್ಯೆಗಳಿಗೆ ಪ್ರತಿಕ್ರಿಯೆ ಕಡ್ಡಾಯವಾಗಿ ದೊರಕುತ್ತಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದರಿಂದ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ತಪ್ಪಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಬಾರದೆಂದು ಒತ್ತಾಯಿಸಿದರು.
ಎನ್.ಆರ್.ಪುರ ಮೆಸ್ಕಾಂ ಎಇಇ ಗೌತಮ್ ಅವರಿಗೆ ಮನವಿ ಸಲ್ಲಿಸಲಾಯಿತು. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಂಚಿನಮನೆ, ಕ್ಷೇತ್ರ ಉಪಾಧ್ಯಕ್ಷೆ ಕೋಕಿಲಮ್ಮ, ಲ್ಯಾಂಪ್ ಸೊಸೈಟಿ ನಿರ್ದೇಶಕ ದಬ್ಗುಣಿ ಜಯರಾಮ, ಅಜಿತ್, ಕೆ.ಟಿ.ವೆಂಕಟೇಶ್, ಕೋಣಿಕೆರೆ ಸತೀಶ್, ವಿಕಾಸ್ ಮಾವಿನಮನೆ, ಗುಬ್ಬೂರು ಸತೀಶ್, ಮುರಳಿ ಮತ್ತಿತರರಿದ್ದರು.