ಎನ್.ಆರ್.ಪುರ ತಾಪಂ ಸಾಮರ್ಥ್ಯಸೌಧದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು.ಇಂದಿರಾನಗರ ರಘು, ಹೂವಮ್ಮ, ನಿತ್ಯಾನಂದ,ನಾಗರಾಜ್, ಕ್ಷೇತ್ರಕುಮಾರ್, ದೇವರಾಜ್, ಬೇಸಿಲ್, ಟಿ.ಟಿ.ಇಸ್ಮಾಯಿಲ್, ಯಾದವರಾಜ್, ಮಂಜುಳಾ ಇದ್ದರು.
ಎನ್.ಆರ್.ಪುರ: ಸಭೆಗೆ ಹಾಜರಾಗುವಂತೆ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳಿಗೆ ನೋಟಿಸ್ ನೀಡಿದರೂ ಸಭೆಗೆ ಬಾರದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಇಂದಿರಾನಗರ ರಘು ಹೇಳಿದರು.
ತಾಪಂ ಸಾಮರ್ಥ್ಯಸೌಧದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಚಿಕ್ಕಮಗಳೂರು ಡಿಪೋದಿಂದ ಒಂದು ಸರ್ಕಾರಿ ಬಸ್ ಸಂಚರಿಸುತ್ತದೆ. ದೂರವಾದರೂ ಜಿಲ್ಲಾ ಕೇಂದ್ರದಿಂದ ಡಿಪೋ ಅಧಿಕಾರಿಗಳು ಸಭೆಗೆ ಆಗಮಿಸಿ ಮಾಹಿತಿ ನೀಡಿ, ಸಮಸ್ಯೆಗಳನ್ನು ಆಲಿಸುತ್ತಾರೆ. ಆದರೆ ನಾಲ್ಕೈದು ಬಸ್‌ಗಳಿರುವ ಶಿವಮೊಗ್ಗ ಡಿಪೋ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಾಗದೆ ನಿರ್ಲಕ್ಷೃವಹಿಸುವುದು ಸರಿಯಲ್ಲ. ಸರ್ಕಾರಿ ಬಸ್‌ಗಳು ಬಸ್ ನಿಲ್ದಾಣಕ್ಕೆ ಬಾರದೆ ಹಾಗೆಯೇ ಹೋಗುತ್ತವೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಬಸ್ ನಿಲ್ಲಿಸುವಂತೆ ತಿಳಿಸಿದರೂ ಹಾಗೆಯೆ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಡಿಪೋ ಅಧಿಕಾರಿಗಳೇ ಇಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷೆ ಚಂದ್ರಮ್ಮ ಅವರಿಗೆ ಒತ್ತಾಯಿಸಿದರು.
ಅಧ್ಯಕ್ಷೆ ಚಂದ್ರಮ್ಮ ಮಾತನಾಡಿ, ಸಭೆಯ ನಡಾವಳಿಯೊಂದಿಗೆ ಮುಂದಿನ ಸಭೆಗೆ ಹಾಜರಾಗುವಂತೆ ನೋಟಿಸ್ ನೀಡಿ. ಇಲ್ಲವಾದಲ್ಲಿ ಸಭೆಗೆ ಬರುವುದಿಲ್ಲ ಎಂದು ಲಿಖಿತವಾಗಿ ನೀಡಲಿ ಎಂದು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಎಲ್ಲ ಸದಸ್ಯರು ಧ್ವನಿಗೂಡಿಸಿದರು.
ಇಂದಿರಾನಗರ ರಘು ಮಾತನಾಡಿ, ಬಿಡಾಡಿ ಜಾನುವಾರುಗಳ ಹಾವಳಿ ಅಧಿಕವಾಗಿದ್ದು ಅಪಘಾತಗಳು ಹೆಚ್ಚಾಗುತ್ತಿವೆ. ಶಾಸಕರ ತ್ರೈಮಾಸಿಕ ಸಭೆಯಲ್ಲೂ ಈ ವಿಚಾರ ಗಂಭೀರವಾಗಿ ಚರ್ಚೆ ನಡೆದಿದೆ. ಪಪಂ ಸೇರಿದಂತೆ ಎಲ್ಲ ಗ್ರಾಪಂಗಳಿಗೂ ಬಿಡಾಡಿ ಜಾನುವಾರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಸಬೇಕೆಂದರು. ತಾಪಂ ಯೋಜನಾಧಿಕಾರಿ ಯಾದವರಾಜ್ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂಗಳಿಗೂ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ತಿಳಿಸಲಾಗುವುದು ಎಂದರು.
ಸದಸ್ಯ ಬೇಸಿಲ್ ಮಾತನಾಡಿ, ಕೆಲವು ಅರ್ಹ ಫಲಾನುಭವಿಗಳು ಬಿಪಿಎಲ್ ಕಾರ್ಡ್‌ನಿಂದ ವಂಚಿತರಾಗುತ್ತಿದ್ದಾರೆ ಎಂದರು. ಸದಸ್ಯ ಟಿ.ಟಿ.ಇಸ್ಮಾಯಿಲ್ ಮಾತನಾಡಿ, ಬಾಳೆಹೊನ್ನೂರಿನ ಒಂದು ಕುಟುಂಬದವರು ಮದುವೆಗೆ, ಇನ್ನಿತರ ಕಷ್ಟ ಕಾಲಕ್ಕೆಂದು ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದಿರುತ್ತಾರೆ. ಇದೇ ತಪ್ಪಾದಂತಾಗಿದೆ. ಇದರಿಂದ ಅರ್ಹ ಬಿಪಿಎಲ್ ಫಲಾನುಭವಿ ಸರ್ಕಾರಿ ಸವಲತ್ತಿನಿಂದ ವಂಚಿತರಾಗಿದ್ದಾರೆ ಎಂದು ದೂರಿದರು. ಅರ್ಹರು ಯಾರು, ಅನರ್ಹರು ಯಾರು?ಎಂದು ಭೇಟಿ ನೀಡಿ ಪರಿಶೀಲಿಸಿ ಎಂದರು. ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಹೂವಮ್ಮ, ನಿತ್ಯಾನಂದ, ನಾಗರಾಜ್, ಕ್ಷೇತ್ರಕುಮಾರ್, ದೇವರಾಜ್, ಬೇಸಿಲ್, ಯಾದವರಾಜ್, ಮಂಜುಳಾ, ಶ್ರೀದೇವಿ ಇತರರಿದ್ದರು.