ನಿಡುವಾಳೆ ಗ್ರಾಮದಲ್ಲಿ ಕಾರು ಅಪಘಾತದಿಂದ ಗಾಯಗೊಂಡಿದ್ದ ಇಬ್ಬರು ಗಾಯಾಳುಗಳನ್ನು ಶಾಸಕಿ ನಯನಾ ಮೋಟಮ್ಮ ಅವರು ಆಸ್ಪತ್ರೆಗೆ ದಾಖಲಿಸಿ ಹೊರ ಭಾಗದಲ್ಲಿ ಕಾಯುತ್ತಿರುವುದು. 
ಚಿಕ್ಕಮಗಳೂರು

ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಿದ ನಯನಾ ಮೋಟಮ್ಮ

ಮೂಡಿಗೆರೆ: ನಿಡುವಾಳೆ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಗಾಯಾಳುಗಳನ್ನು ಶಾಸಕಿ ನಯನಾ ಮೋಟಮ್ಮ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮರೆದಿದ್ದಾರೆ.
ನಿಡುವಾಳೆಯಿಂದ ಮೂಡಿಗೆರೆ ಪಟ್ಟಣದ ಕಡೆಗೆ ಸಂಚರಿಸುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸಾಲು ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಹಾರ್ಮಕ್ಕಿ ಗ್ರಾಮದ ಪ್ರಫುಲ್ ಮತ್ತು ಕಿರಣ್ ಗಂಭೀರವಾಗಿ ಗಾಯಗೊಂಡಿದ್ದರು. ಹೊರನಾಡು ದೇವಸ್ಥಾನದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಗಿಸಿ ಪಟ್ಟಣಕ್ಕೆ ವಾಪಸಾಗುತ್ತಿದ್ದ ಶಾಸಕಿ ನಯನಾ ಮೋಟಮ್ಮ ಅವರು ಅದೇ ಸಮಯದಲ್ಲಿ ಅಪಘಾತ ನಡೆದ ಸ್ಥಳಕ್ಕೆ ತಲುಪಿದ್ದಾರೆ.
ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದನ್ನು ಗಮನಿಸಿದ ಶಾಸಕಿ ನಯನಾ ಮೋಟಮ್ಮ ಕಾರು ನಿಲ್ಲಿಸಿ ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಕಾರಿನೊಳಗೆ ಸಿಲುಕಿಕೊಂಡಿದ್ದ ಇಬ್ಬರನ್ನು ತಮ್ಮ ಸಹಾಯಕರ ನೆರವಿನಲ್ಲಿ ಶಾಸಕಿ ಕಾರಿನಿಂದ ಹೊರಗೆ ಕರೆದುಕೊಂಡು ಬಂದು ತಮ್ಮ ಕಾರಿನಲ್ಲಿ ಇಬ್ಬರು ಗಾಯಾಳುಗಳನ್ನು ಬಣಕಲ್ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಶಾಸಕಿ ನಯನಾ ಮೋಟಮ್ಮ ಅವರ ಸಮಯ ಪ್ರಜ್ಞೆಯಿಂದ ಇಬ್ಬರು ಗಾಯಾಳುಗಳು ಪ್ರಾಣಾಪಯಾದದಿಂದ ಪಾರಾಗಿದ್ದಾರೆ. ಶಾಸಕಿಯ ಈ ಮಾನವೀಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.