ಮಂಜುನಾಥ್ 
ಚಿಕ್ಕಮಗಳೂರು

ಯುವತಿಗೆ ಜನ್ಮದಿನದ ಶುಭಾಶಯ ಕೋರಿದ್ದಕ್ಕೆ ಕೊಲೆ

ಪ್ರಮುಖ ಮುಖ್ಯಾಂಶಗಳು

  • ಇಬ್ಬರು ಅರೆಸ್ಟ್
  • ಇನ್ನುಳಿದ ವೇಣು, ಅಪ್ಪು ಎಂಬುವರು ತಲೆಮರೆಸಿಕೊಂಡಿದ್ದಾರೆ

ತರೀಕೆರೆ: ಬೇರೆ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಮೇಲಿನ ಹುಚ್ಚು ಪ್ರೀತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಗೆ ಜನ್ಮದಿನದ ಶುಭಾಶಯ ಕೋರಲು ಆಕೆ ಜತೆಗಿದ್ದ ಫೋಟೋ ಅಪ್‌ಲೋಡ್ ಮಾಡಿದ್ದ ಯುವಕನನ್ನು ಅತ್ತಿಗನಾಳು ಗ್ರಾಮ ಸಮೀಪ ಬೈಪಾಸ್ ರಸ್ತೆ ಕೆಳ ಸೇತುವೆ ಬಳಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.

ಉಡೇವಾ ಗ್ರಾಮದ ಮಂಜುನಾಥ್ (21)ಕೊಲೆಯಾದವರು. ಆರೋಪಿಗಳಾದ ಕಿರಣ (19) ಹಾಗೂ ಮನು (21) ಎಂಬುವವರನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ವೇಣು, ಅಪ್ಪು ಎಂಬುವರು ತಲೆಮರೆಸಿಕೊಂಡಿದ್ದಾರೆ.

ಬುಧವಾರ ಬೆಳಗ್ಗೆ ಉಡೇವಾ ಗ್ರಾಮದಿಂದ ಕೋಟೇಶ್ ಎಂಬುವರ ಜತೆಗೂಡಿ ಪಟ್ಟಣದ ಮನೆಯೊಂದಕ್ಕೆ ಅಡಕೆ ಕೆಲಸಕ್ಕಾಗಿ ಬಂದಿದ್ದ ಮಂಜುನಾಥ್ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಲು ಬೈಕ್ ಹತ್ತಿದ್ದಾನೆ. ಈ ವೇಳೆ ಮಂಜುನಾಥ್ ಪ್ರೀತಿಸಿದ್ದ ಎನ್ನಲಾದ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೇಣು ಎಂಬಾತ ಕರೆ ಮಾಡಿ ನಿನ್ನೊಂದಿಗೆ ಮಾತನಾಡುವುದಿದೆ. ಅತ್ತಿಗನಾಳು ಗ್ರಾಮದ ಕೆಳ ಸೇತುವೆ ಬಳಿ ಕೂಡಲೇ ಬರುವಂತೆ ತಿಳಿಸಿದ್ದಾನೆ. ಸಂಜೆ 7.45ರ ಹೊತ್ತಿಗೆ ಕೋಟೇಶ್ ಜತೆ ಅಲ್ಲಿಗೆ ಹೋದ ಮಂಜುನಾಥ್‌ನನ್ನು ಸುತ್ತುವರಿದ ವೇಣು ಸಹಿತ ನಾಲ್ವರು ಆರೋಪಿಗಳಿದ್ದ ಗುಂಪು ಜಗಳವಾಡಿದ್ದಾರೆ. ಯುವತಿಯ ಜನ್ಮದಿನಕ್ಕೆ ಶುಭಾಶಯ ಕೋರಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಕಿರುವುದು ಮಾತ್ರವಲ್ಲ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು ಏಕೆ? ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಯುವತಿಯ ಅಣ್ಣ ಕಿರಣ ಎಂಬಾತ ಮಂಜುನಾಥನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಮಂಜುನಾಥ್ ಹೊಟ್ಟೆಯಿಂದ ರಕ್ತಸ್ರಾವವಾಗುತ್ತಿದ್ದಾಗ ಕೋಟೇಶ್ ಮತ್ತು ಆರೋಪಿ ವೇಣು ಹೊಟ್ಟೆಗೆ ಟವೆಲ್ ಕಟ್ಟಿ, ಬೈಕ್‌ನಲ್ಲಿ ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆರೋಪಿ ವೇಣು ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಮಂಜುನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಮಂಜುನಾಥ್ ಮೃತಪಟ್ಟಿದ್ದಾರೆ.