ತರೀಕೆರೆ ಪುರಸಭೆ ಆವರಣದಲ್ಲಿ ಅಧ್ಯಕ್ಷ ವಸಂತ್‌ಕುಮಾರ್ 2026-27ನೇ ಸಾಲಿನ ಆಯವ್ಯಯ ಪ್ರತಿ ಪ್ರದರ್ಶಿಸಿದರು.
ತರೀಕೆರೆ: ಪುರಸಭೆಯನ್ನು ಜನಸ್ನೇಹಿಯನ್ನಾಗಿಸಲು ಸಾರ್ವಜನಿಕರು ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಲಹೆ ಪಡೆದು ಪಟ್ಟಣದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್ ತಿಳಿಸಿದರು.
ಪುರಸಭೆಯಲ್ಲಿ ಅಧ್ಯಕ್ಷ ವಸಂತ್‌ಕುಮಾರ್ 2026-27ನೇ ಸಾಲಿಗೆ 5.16 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿ ಮಾತನಾಡಿ, ಆಯವ್ಯಯದಲ್ಲಿ ಲಭ್ಯ ಅನುದಾನ ಮತ್ತು ಆದಾಯದ ಮೂಲಕ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲು ಹೊಸ ಟ್ಯಾಂಕರ್ ಖರೀದಿಗೆ 5 ಲಕ್ಷ ರೂ., ಕಿರು ನೀರು ಘಟಕ ಸ್ಥಾಪನೆಗೆ 10 ಲಕ್ಷ ರೂ.ಗಳನ್ನು ಪುರಸಭೆ ನಿಧಿಯಲ್ಲಿ ಕಾಯ್ದಿರಿಸಲಾಗಿದೆ. ಪ್ರಸಕ್ತ ಸಾಲಿನ 16ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾಗುವ 3.77 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದರು.
ಸರ್ಕಾರದಿಂದ ಎಸ್‌ಎ್ಸಿ ವೇತನ ಅನುದಾನ 3.12 ಕೋಟಿ ರೂ. ಹಂಚಿಕೆಯಾಗುವ ನಿರೀಕ್ಷೆ ಇದ್ದು, ಕಚೇರಿ ಕಾಯಂ ಸಿಬ್ಬಂದಿ ವೇತನ ಹಾಗೂ ಇತರ ಭತ್ಯೆ ಪಾವತಿಗೆ ಬಳಸಿಕೊಳ್ಳಲಾಗುವುದು. ಬೀದಿ ದೀಪಗಳ ನಿರ್ವಹಣೆಗೆ ಬಿಡುಗಡೆಯಾಗುವ 51 ಲಕ್ಷ ರೂ. ಹಾಗೂ ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಪಾವತಿಗೆ ಹಂಚಿಕೆಯಾಗುವ 2.34 ಕೋಟಿ ರೂ.ವನ್ನು ಹಂತ ಹಂತವಾಗಿ ಮೆಸ್ಕಾಂಗೆ ಪಾವತಿಸಲಾಗುವುದು ಎಂದು ಮಾಹಿತಿ ನೀಡಿದರು.
ಎಸ್‌ಎ್ಸಿ ಮುಕ್ತ ನಿಧಿ ಅನುದಾನ 9 ಲಕ್ಷ ರೂ., ಎಸ್‌ಎ್ಸಿ ಕುಡಿಯುವ ನೀರಿನ ಅನುದಾನ 6 ಲಕ್ಷ, ಎಸ್‌ಎ್ಸಿ (ಎಸ್‌ಸಿಎ್ಪಿ) 2 ಲಕ್ಷ, ಎಸ್‌ಎ್ಸಿ (ಟಿಎಸ್‌ಪಿ) ಅನುದಾನ 1 ಲಕ್ಷ ರೂ. ಹಂಚಿಕೆಯಾಗುವ ನಿರೀಕ್ಷೆ ಇದ್ದು, ವಿವಿಧ ಅನುದಾನದಡಿ ಬಿಡುಗಡೆಯಾಗುವ ಎಲ್ಲ ಹಣವನ್ನು ಕ್ರಿಯಾಯೋಜನೆ ರೂಪಿಸಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬಳಸಿಕೊಳ್ಳಲಾಗುವುದು ಎಂದರು.
ದೀನ ದಯಾಳ್ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಪುರಸಭೆಗೆ ಬಿಡುಗಡೆಯಾಗುವ 20 ಲಕ್ಷ ರೂ. ಅನುದಾನದಲ್ಲಿ ನಗರ ಸ್ವಯಂ ಉದ್ಯೋಗ ಯೋಜನೆ, ಮಹಿಳಾ ಗುಂಪು ಸ್ವಯಂ ಉದ್ಯೋಗ ಯೋಜನೆಯಡಿ ವಿವಿಧ ಕೆಲಸ ಕೈಗೊಳ್ಳಲು ಹಾಗೂ ಸ್ವ ಸಹಾಯ ಸಂಘಗಳಿಗೆ ಆವರ್ತಕ ನಿಧಿ ಅನುದಾನ ನೀಡಲು ರೂಪುರೇಷೆ ತಯಾರಿಸಲಾಗುವುದು ಎಂದು ಹೇಳಿದರು. ಪುರಸಭೆ ಉಪಾಧ್ಯಕ್ಷೆ ಗೀತಾ, ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್ ಮತ್ತಿತರರಿದ್ದರು.