ಎಚ್.ಜಿ.ಸುರೇಂದ್ರ. 
ಚಿಕ್ಕಮಗಳೂರು

ಮೂಡಿಗೆರೆ ಕಸಬಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸಿ.ಬಿ.ಶಂಕರ್ ವಜಾ

ಮೂಡಿಗೆರೆ: ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸದಿರುವುದು ಹಾಗೂ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ವರ್ತಿಸಿದ ಹಿನ್ನಲೆಯಲ್ಲಿ ಕಸಬಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸಿ.ಬಿ.ಶಂಕರ್ ಅವರನ್ನು ವಜಾಗೊಳಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಹೇಳಿದರು.
ಗೋಣಿಬೀಡು, ಬಣಕಲ್ ಹೋಬಳಿ ಅಧ್ಯಕ್ಷರನ್ನು ಸದ್ಯದಲ್ಲೇ ಬದಲಾವಣೆ ಮಾಡಲಾಗುವುದು. ಕಾಂಗ್ರೆಸ್‌ನಲ್ಲಿ ಹೋಬಳಿ ಅಧ್ಯಕ್ಷರ ಹುದ್ದೆ ಇಲ್ಲ. ಸಂಘಟನೆ ದೃಷ್ಟಿಯಿಂದ ಮೂಡಿಗೆರೆ ಮತ್ತು ಶೃಂಗೇರಿಯಲ್ಲಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಅಧಿಕಾರವಿರುವುದು ರಾಜ್ಯಾಧ್ಯಕ್ಷರಿಗೆ ಮಾತ್ರ. ನನ್ನನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಿದರೂ ಅವರು ಒಪ್ಪದೆ ಮುಂದುವರಿಸಿದ್ದಾರೆ. ನಾನು ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ವರ್ತಿಸಿಲ್ಲ. ಈಗ ಕೆಲವರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಕಚೇರಿ ಕಟ್ಟಡ ಹಿಂದಿನ ಅಧ್ಯಕ್ಷ ಹೇಮಶೇಖರ್ ಹೆಸರಿನಲ್ಲಿ ಕರಾರು ಆಗಿದೆ. ಹಾಗಾಗಿ ಅಲ್ಲಿಗೆ ಶಾಸಕರು ಹೋಗುತ್ತಿಲ್ಲ ಎಂದು ಕೆಲವರು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ಗೆ ಲಿಖಿತ ದೂರು ನೀಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಕಚೇರಿ ಯಾರ ಹೆಸರಿನಲ್ಲೂ ಇಲ್ಲ. ಇದು ಪಕ್ಷದ ಕಟ್ಟಡವಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಕಟ್ಟಡ ಸಮಿತಿ ರಚಿಸಿ ಅದಕ್ಕೆ ಮಾಜಿ ಸಚಿವೆ ಮೋಟಮ್ಮ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮಾಜಿ ಸಭಾಪತಿ ಬಿ.ಎಲ್.ಶಂಕರ್ ಸಹಿತ ಹಿರಿಯ ಕಾಂಗ್ರೆಸ್ ನಾಯಕರು ಸಮಿತಿಯಲ್ಲಿದ್ದಾರೆ. ಹೇಮಶೇಖರ್‌ಗೆ ಕಟ್ಟಡ ನಿರ್ಮಾಣ ಜವಾಬ್ದಾರಿ ಮಾತ್ರ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣದಲ್ಲಿ ಆಗಿರುವ ಎಲ್ಲ ದೋಷಕ್ಕೆ ಕಟ್ಟಡ ಸಮಿತಿ ಅಧ್ಯಕ್ಷೆ ಮೋಟಮ್ಮ ಅವರು ಹೊಣೆಗಾರರಾಗಿದ್ದಾರೆ. ಆದರೆ ಕಳೆದವಾರ ಶಾಸಕರ ಹಿಂಬಾಲಕರು ಬೆಂಗಳೂರಿಗೆ ತೆರಳಿ ಬ್ಲಾಕ್ ಕಾಂಗ್ರೆಸ್ ಕಟ್ಟಡದ ಬಗ್ಗೆ ಸುಳ್ಳು ಆರೋಪ ಹೊರಿಸಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದರು. ಕಟ್ಟಡ ನಿರ್ಮಾಣ ಹೊಣೆಯಿಂದ ಇತ್ತೀಚೆಗೆ ಹೇಮಶೇಖರ್ ಅವರನ್ನು ಬಿಡುಗಡೆ ಮಾಡಿ ನಿಶಾಂತ್ ಪಟೇಲ್ಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.