ಮೂಡಿಗೆರೆಯ ಇನ್‌ಕ್ಯೂಬೇಷನ್ ಸೆಂಟರ್‌ನಲ್ಲಿರುವ ಯಂತ್ರೋಪಕರಣಗಳನ್ನು ವೀಕ್ಷಿಸುತ್ತಿರುವ ಶಾಸಕಿ ನಯನಾ ಮೋಟಮ್ಮ.
ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಮುಂದಿನ ದಿನಗಳಲ್ಲಿ ಸಾಂಬಾರ ಪದಾರ್ಥಗಳ ಕೇಂದ್ರ ಸ್ಥಾನವಾಗಲಿದೆ. ಮೂಡಿಗೆರೆ ತಾಲೂಕಿನಲ್ಲೇ ಸ್ಪೈಸ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಇದಕ್ಕಿಂತಲೂ ಮೊದಲು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಆವರಣದಲ್ಲಿ ಸಾಂಬಾರ ಪದಾರ್ಥಗಳ ಗ್ರೇಡಿಂಗ್‌ಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇನ್‌ಕ್ಯೂಬೇಷನ್ ಸೆಂಟರ್ ಕಾರ್ಯಾರಂಭ ಮಾಡಿದೆ.
ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಹೆಚ್ಚಾಗಿ ಸಾಂಬಾರ ಪದಾರ್ಥಗಳನ್ನು ಬೆಳೆಯಲಾಗುತ್ತದೆ. ಹೀಗಾಗಿ ಒಂದು ಜಿಲ್ಲೆ, ಒಂದು ಉತ್ಪನ್ನ ಘೋಷವಾಕ್ಯದಡಿ ಕೆಪೆಕ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಸಾಂಬಾರ ಪದಾರ್ಥಗಳ ಗ್ರೇಡಿಂಗ್ ಘಟಕ ಸ್ಥಾಪನೆ ಮಾಡಿದೆ. ಇಲ್ಲಿಗೆ ಯಾವುದೇ ರೈತರು ತಮ್ಮ ಸಾಂಬಾರ ಪದಾರ್ಥಗಳ ಉತ್ಪನ್ನಗಳನ್ನು ತಂದು ಗ್ರೇಡಿಂಗ್ ಮಾಡಿಕೊಂಡು ತೆರಳಬಹುದಾಗಿದೆ. ತಮ್ಮ ಉತ್ಪನ್ನಗಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ವಿಭಜಿಸಿಕೊಂಡರೆ ರೈತರು ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿಯೇ ಗ್ರೇಡಿಂಗ್ ಘಟಕ ಕಾರ್ಯ ನಿರ್ವಹಿಸಲಿದೆ.
2.10 ಕೋಟಿ ರೂ. ವೆಚ್ಚದಲ್ಲಿ ಇನ್‌ಕ್ಯೂಬೇಷನ್ ಸೆಂಟರ್ ಆರಂಭಗೊಂಡಿದ್ದು, ಇಲ್ಲಿ ಗ್ರೇಡಿಂಗ್ ಯುನಿಟ್, ಕಸ ವಿಂಗಡಿಸುವ ಯಂತ್ರ, ಡ್ರಮ್ ರೋಸ್ಟರ್, ಪ್ಯಾಕಿಂಗ್ ಯಂತ್ರಗಳಿವೆ. ರೈತರು ತಮ್ಮ ಉತ್ಪನ್ನಗಳನ್ನು ಇಲ್ಲಿಗೆ ತಂದಲ್ಲಿ ಗ್ರೇಡಿಂಗ್ ಮಾಡಿಕೊಂಡು ಪ್ಯಾಕಿಂಗ್ ಸಹ ಮಾಡಿಸಿಕೊಂಡು ತೆರಳಬಹುದಾಗಿದೆ. ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕನಿಷ್ಠ ಮಟ್ಟದ ದರ ವಿಧಿಸಲಾಗುತ್ತದೆ.
ಇದುವರೆಗೂ ಸಾಂಬಾರ ಪದಾರ್ಥಗಳನ್ನು ಬೆಳೆಯುವ ರೈತರು ನೇರವಾಗಿ ಸಾಮಾನ್ಯ ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿದ್ದರು. ತಮ್ಮ ಉತ್ಪನ್ನಗಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ವಿಭಜಿಸುತ್ತಿರಲಿಲ್ಲ. ಹೀಗಾಗಿ ರೈತರಿಗೆ ಉತ್ತಮ ಧಾರಣೆ ಸಿಗುತ್ತಿರಲಿಲ್ಲ. ಇದೀಗ ಮೂಡಿಗೆರೆಯಲ್ಲಿ ಗ್ರೇಡಿಂಗ್ ಘಟಕ ಆರಂಭಗೊಂಡಿರುವುದರಿಂದ ಉತ್ಪನ್ನಗಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ವಿಭಜಿಸಿಕೊಳ್ಳಲು ಸಾಧ್ಯವಾಗಲಿದೆ. ಇದರಿಂದಾಗಿ ಗುಣಮಟ್ಟದ ಉತ್ಪನ್ನಕ್ಕೆ ಉತ್ತಮ ಬೆಲೆ ಸಿಗಲಿದ್ದು, ಕನಿಷ್ಠ ಮಟ್ಟದ ಉತ್ಪನ್ನ ಸಾಮಾನ್ಯ ಬೆಲೆಗೆ ಬಿಕರಿಯಾಗಲಿದೆ. ಆಗ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ.
ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದಾಗ ಮಾತ್ರವೇ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ. ಆದರೆ ಇದುವರೆಗೆ ರೈತರು ಸಾಂಬಾರ ಪದಾರ್ಥಗಳ ಮೌಲ್ಯವರ್ಧನೆ ಮಾಡಲು ಮುಂದಾಗಿರಲಿಲ್ಲ. ಬ್ರಾೃಂಡಿಗ್ ಮಾಡಲೂ ಸಾಧ್ಯವಿಲ್ಲ. ಇದೀಗ ಮೂಡಿಗೆರೆಯಲ್ಲಿ ಆರಂಭಗೊಂಡಿರುವ ಇನ್‌ಕ್ಯೂಬೇಷನ್ ಸೆಂಟರ್‌ನಲ್ಲಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ರೈತರು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿಕೊಂಡ ಬಳಿಕ ಅಲ್ಲಿಯೇ ಆಧುನಿಕ ತಂತ್ರಜ್ಞಾನದ ಪ್ಯಾಕಿಂಗ್ ವ್ಯವಸ್ಥೆಯೂ ಇದ್ದು ಪ್ಯಾಕಿಂಗ್ ಕೂಡ ಮಾಡಿಸಿಕೊಳ್ಳಬಹುದಾಗಿದೆ. ಬಳಿಕ ತಮ್ಮದೆ ಬ್ರಾೃಂಡ್ ಮಾಡಿಕೊಂಡು ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆಗ ರೈತರ ಲಾಭ ದುಪ್ಪಟ್ಟಾಗುವುದರಲ್ಲಿ ಅನುಮಾನವಿಲ್ಲ.
ರೈತ ಉತ್ಪಾದಕ ಸಂಸ್ಥೆಗಳಿಗೂ ಅವಕಾಶ
ರೈತರು ಸ್ವಂತವಾಗಿ ಇನ್‌ಕ್ಯೂಬೇಷನ್ ಸೆಂಟರ್ ಆರಂಭ ಮಾಡಿಕೊಳ್ಳುವುದು ಕಷ್ಟಸಾಧ್ಯ. ಘಟಕ ಸ್ಥಾಪನೆಗೆ ಕನಿಷ್ಠ 2 ಕೋಟಿ ರೂ. ವೆಚ್ಚವಾಗುತ್ತದೆ. ಇದಕ್ಕೆ ಬದಲಾಗಿ ರೈತ ಉತ್ಪಾದಕ ಸಂಸ್ಥೆಗಳು ಮುಂದೆ ಬಂದು ದೊಡ್ಡ ಮಟ್ಟದಲ್ಲಿ ಇನ್‌ಕ್ಯೂಬೇಷನ್ ಸೆಂಟರ್ ಆರಂಭಿಸಬಹುದಾಗಿದೆ. ಹತ್ತು ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆ ಮಾಡಿದರೆ ಕೆಪೆಕ್‌ನಿಂದ ಮೂರು ಕೋಟಿ ರೂ. ಸಬ್ಸಿಡಿ ಸಿಗಲಿದೆ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು. ರೈತ ಉತ್ಪಾದಕ ಸಂಸ್ಥೆಗಳೇ ಘಟಕಗಳನ್ನು ಅಲ್ಲಲ್ಲಿ ಆರಂಭಿಸಿದರೆ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ. ಕೆಪೆಕ್‌ನಿಂದ ರೈತ ಉದ್ಯಮಿಗಳನ್ನು ಹುಟ್ಟುಹಾಕಬೇಕೆಂಬ ಉದ್ದೇಶದಿಂದ ಕಿರು ಆಹಾರ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಹೆಚ್ಚಿನ ಸಬ್ಸಿಡಿ ನೀಡಲಾಗುತ್ತಿದೆ. ಈ ವರ್ಷ ಕನಿಷ್ಠ 5 ಸಾವಿರ ಕಿರು ಆಹಾರ ಸಂಸ್ಕರಣಾ ಘಟಕ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.