ಚಿಕ್ಕಮಗಳೂರು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಅವರ ಸಮಕ್ಷಮದಲ್ಲಿ ಎಂಎಸ್‌ಎಂಇಗಳಿಗೆ ಸಿಗುವ ಸವಲತ್ತುಗಳ ಕುರಿತ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.
ಚಿಕ್ಕಮಗಳೂರು: ಎಂಎಸ್ಎಂಇ ದಿನಾಚರಣೆಯ ಅಂಗವಾಗಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಅವರ ಸಮಕ್ಷಮದಲ್ಲಿ ಎಂಎಸ್‌ಎಂಇಗಳಿಗೆ ಸಿಗುವ ಸವಲತ್ತುಗಳ ಕುರಿತ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಮಹೇಶ್ ಕುಮಾರ್, ನಮ್ಮ, ದೇಶದ ಆರ್ಥಿಕತೆಯ ಜಿಡಿಪಿಯಲ್ಲಿ ಎಂಎಸ್‌ಎಂಇಗಳ ಕೊಡುಗೆ ಬಹಳಷ್ಟಿದೆ. ಸರ್ವಿಸ್ ಸೆಕ್ಟರ್ ಬಿಟ್ಟರೆ, ಅಗ್ರಿಕಲ್ಚರ್ ಸೆಕ್ಟರ್ ಮತ್ತು ಮ್ಯಾನುಫ್ಯಾಕ್ಚರಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಎಂಎಸ್‌ಎಂಇಗಳು ಸೃಷ್ಟಿ ಮಾಡುತ್ತವೆ. ನಮ್ಮ ಬ್ಯಾಂಕುಗಳಿಂದ ಇರಬಹುದು, ಸರ್ಕಾರಗಳಿಂದ ಇರಬಹುದು ಏನೇನು ಸೌಲಭ್ಯಗಳಿವೆಯೋ ಅವುಗಳನ್ನು ಸಾರ್ವಜನಿಕರಿಗೆ ಹಾಗೂ ಉದ್ಯಮಿಗಳಿಗೆ ತಿಳಿಸುವ ನಿಟ್ಟಿನಲ್ಲಿ ನಾವು ಇವತ್ತು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಪ್ರಭು ಮಾತನಾಡಿ, ಅಂತರರಾಷ್ಟ್ರೀಯ ಎಂಎಸ್ಎಂಇ ದಿನಾಚರಣೆ ಜೂನ್27 ರಂದು ಆಚರಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 27ರಂದು ರಜೆ ಇರುವುದರಿಂದ ಈ ಜಾಗೃತಿ ಕಾರ್ಯಕ್ರಮವನ್ನು ಮುಂಚಿತವಾಗಿಯೇ ಹಮ್ಮಿಕೊಳ್ಳಲಾಗಿದೆ ಎಂದರು.
ಚಿಕ್ಕಮಗಳೂರು ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಎಂಎಸ್ಎಂಇಗೆ ಸಂಬಂಧಿಸಿದ 4 ಮುಖ್ಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ಎಂಎಸ್ಎಂಇ ಸಾಲ ಸೌಲಭ್ಯಗಳು, ನೊಂದಣಿ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳು ಮತ್ತು ಸರ್ಕಾರದ ಸೌಲತ್ತುಗಳ ಬಗ್ಗೆ ಮಾಹಿತಿ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ನರೇಂದ್ರ, ಪ್ರಮುಖರಾದ ಮಹೇಶ್, ಶಿವಕುಮಾರ್, ಫಹಾದ್, ಶಿವ ಪ್ರಸಾದ್ ಮತ್ತಿತರರಿದ್ದರು.