ಕಡೂರಲ್ಲಿ ಚೆನ್ನಮ್ಮ ದೇವೇಗೌಡರ ನುಡಿ ನಮನದ ನಾಗರಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಕಡೂರು: ಸ್ತ್ರೀಕುಲಕ್ಕೆ ಘನತೆ ತರುವ ರೀತಿಯಲ್ಲಿ ಬಾಳಿ ಬದುಕಿದವರು ಚೆನ್ನಮ್ಮ ದೇವೇಗೌಡರು ಎಂದು ಸಂಸದ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಗೀತಾ ಮಂದಿರದಲ್ಲಿ ಏರ್ಪಡಿಸಿದ್ದ ಚೆನ್ನಮ್ಮ ದೇವೇಗೌಡರ ನುಡಿ ನಮನ ಹಾಗೂ ನಾಗರಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿ, ಶಿವೈಕ್ಯರಾದ ಚನ್ನಮ್ಮ ಅವರು ನಿರಾಡಂಬರ ಮತ್ತು ಸರಳತೆ ಮೈಗೂಡಿಸಿಕೊಂಡು ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದ ಮಾತೃ ಹೃದಯಿ ಎಂದು ಬಣ್ಣಿಸಿದರು.
ಅವಿಭಾಜ್ಯ ಕುಟುಂಬ ಕಲ್ಪನೆ ಅಸ್ಥಿತ್ವ ಕಳೆದು ಕೊಂಡಿರುವ ಇಂದಿನ ದಿನಮಾನಗಳಲ್ಲಿ ಚೆನ್ನಮ್ಮನ ಅವರ ಹೃದಯ ಶ್ರೀಮಂತಿಕೆ ಅದನ್ನು ಮರುಸ್ಥಾಪಿಸಿಕೊಟ್ಟಿದ್ದರು. ಆರೈಕೆ, ಆತಿಥ್ಯಗಳ ಜತೆ ಸುಖ ದುಃಖವನ್ನು ಸಮಾನವಾಗಿ ಸ್ವೀಕರಿಸಿದ್ದ ಚೆನ್ನಮ್ಮ ಒಂದರ್ಥದಲ್ಲಿ ವಿಶ್ವಮಾನವ ತತ್ವಕ್ಕೆ ಪ್ರತೀಕವಾಗಿದ್ದರು ಎಂದರು.
ಅನಸೂಯ ಮಂಜುನಾಥ್ ಮಾತನಾಡಿ, ಹಾಸನ ಜಿಲ್ಲೆಯ ಕುಗ್ರಾಮವೊಂದರಲ್ಲಿ ಜನಿಸಿದ ಚೆನ್ನಮ್ಮ ಅವರದು ಸಂಸ್ಕಾರಯುತ ಕುಟುಂಬವಾಗಿತ್ತು. ಜತೆಗೆ ಪತಿ ದೇಶದ ಪ್ರಧಾನಿಯಾದಾಗಲೂ ಯಾವುದೇ ಹಮ್ಮುಬಿಮ್ಮು ಪ್ರದರ್ಶಿಸದೆ ಸಾಮಾನ್ಯ ಮಹಿಳೆಯಂತೆ ವರ್ತಿಸುವ ಮೂಲಕ ಸ್ತ್ರೀ ಲೋಕದ ಪಾಲಿಗೆ ಮಾದರಿಯಾಗಿದ್ದರು ಎಂದರು.
ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ನಂದಿ ಮಠದ ಶ್ರೀ ವೃಷಭೇಂದ್ರ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಆದಿಜಾಂಬವ ಮಠದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ, ಜಾವಗಲ್ ದರ್ಗಾ ಸಮಿತಿಯ ಮೌಲಾನಾ, ಫಾದರ್ ಡಿಸೋಜಾ, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮಾಜಿ ಶಾಸಕ ವೈಎಸ್‌ವಿ ದತ್ತ, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕೆಎಂಎಫ್ ನಿರ್ದೇಶಕ ಬಿದರೆ ಜಗದೀಶ್, ವೈ.ಎಸ್.ರವಿಪ್ರಕಾಶ್, ಕೆ.ಎಂ.ಮಹೇಶ್ವರಪ್ಪ, ಸಿ.ಆರ್.ಪ್ರೇಮ್‌ಕುಮಾರ್ ಮತ್ತಿತರಿದ್ದರು.