ಗುಡಿಬಂಡೆ ತಾಲೂಕು ಕಚೇರಿ ಮುಂಭಾಗ ಸಿಪಿಎಂ ಪಕ್ಷದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ವಕೀಲ ಶಿವಪ್ಪ, ಡಿವೈಎಫ್ಐ ಸಂಘಟನೆಯ ಜಿಲ್ಲಾ ಸಂಚಾಲಕ ಶ್ರೀನಿವಾಸ್, ಮುಖಂಡರಾದ ರಮಣ, ಆದಿನಾರಾಯಣಸ್ವಾಮಿ ಇದ್ದರು.
ಪುನರ್ ಪರಿಶೀಲನೆಗೆ ಸಿಪಿಎಂ ಪಕ್ಷದ ತಾಲೂಕು ಘಟಕದಿಂದ ಒತ್ತಾಯ
ಗುಡಿಬಂಡೆ: ತಾಲೂಕಿನ ಕೂಲಿ&ಕಾರ್ಮಿಕರ, ರೈತರ ಮಕ್ಕಳು ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರ ಐಟಿಆರ್ ಫೈಲ್, ಸಾಮಾನ್ಯರ ಬಿಪಿಎಲ್ ಕಾರ್ಡ್ಗಳು ರದ್ದಾಗಿದ್ದು, ಸಂಬಂಧಿಸಿದವರು ಪರಿಶೀಲಿಸಿ ಬಡವರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ ತಿಳಿಸಿದರು.
ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಸಿಪಿಎಂ ಪಕ್ಷದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 650ಕ್ಕೂ ಅಧಿಕ ಕುಟುಂಬಗಳ ರೇಷನ್ ಕಾರ್ಡ್ ರದ್ದಾಗಿರುವ ಹಿನ್ನಲೆಯಲ್ಲಿ ಪುನರ್ ಪರಿಶೀಲಿಸಬೇಕು. ಇಲವಾದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಸರ್ಕಾರದ ಮಾನದಂಡದಂತೆ 1.20 ಲಕ್ಷ ರೂ.ಆದಾಯ ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ಗಳನ್ನು ರದ್ದೂಗೊಳಿಸಿ ಎಪಿಎಲ್ಗೆ ಬದಲಾಯಿಸಲಾಗುತ್ತಿದೆ. ಈ ಆದಾಯದಲ್ಲಿ ಜೀವನ ನಡೆಸಲು ಸಾಧ್ಯವೇ ಎಂಬುದನ್ನು ಸರ್ಕಾರ ಮನಗಾಣಬೇಕಿದೆ ಎಂದರು. ತಾಲೂಕು ಕೇಂದ್ರದಲ್ಲಿ ಆಹಾರ ನಿರೀಕ್ಷಕರ ಹುದ್ದೆ ಖಾಲಿಯಿದೆ. ಬಾಗೇಪಲ್ಲಿಯಿಂದ 2 ದಿನಗಳ ಕಾಲ ಮಾತ್ರ ಪ್ರಭಾರಿ ಹುದ್ದೆ ಮೇಲೆ ನಿಯೋಜಿಸುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ತಾಲೂಕಿಗೆ ಆರು ದಿನಗಳು ಲಭ್ಯವಿರುವ ಒಬ್ಬ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದರು.
ಮುಖಂಡ, ವಕೀಲ ಶಿವಪ್ಪ ಮಾತನಾಡಿ, ಯಾವ ಶಾಸಕರು ಬಡವರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡುತ್ತಿಲ್ಲ. ಬಡವರನ್ನು ತಮ್ಮ ಅಡಿಯಾಳಾಗಿ ಇಟ್ಟುಕೊಳ್ಳುವ ಮನೋಭಾವದಿಂದ ಬಡವರ ಕಾರ್ಡ್ಗಳ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ರೇಷನ್ ಕಾರ್ಡ್ ಮೂಲಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೇರಿ ಸರ್ಕಾರದ ಯಾವುದೇ ಸೌಲಭ್ಯ ಕಲ್ಪಿಸಬಾರದು ಎಂಬ ಉದ್ದೇಶದಿಂದ ಕಾರ್ಡ್ಗಳನ್ನು ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಡಿವೈಎಫ್ಐ ಸಂಘಟನೆ ಜಿಲ್ಲಾ ಸಂಚಾಲಕ ಶ್ರೀನಿವಾಸ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಜಾಸ್ತಿಯಾಗಿದೆ. ಅವರಿಗೆ ಲಂಚ ನೀಡಿದರೆ ಮಾತ್ರ ಕೆಲಸ ಆಗುತ್ತದೆ, ಇಲ್ಲದಿದ್ದರೆ ಬಡವರ ಕಾರ್ಯಗಳು ನಡೆಯುವುದಿಲ್ಲ ಎಂದರು. ನಾರಾಯಣಸ್ವಾಮಿ, ಶ್ರೀನಿವಾಸ, ರಾಮಕೃಷ್ಣ, ಆದೇಪ್ಪ, ರಾಮು, ರಾಮಮೂರ್ತಿ, ಸೋಮಶೇಖರ್ ರೆಡ್ಡಿ, ನರಸಿಂಹಪ್ಪ ಇದ್ದರು.