ಮೂಡಿಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದರು. 
ಚಿಕ್ಕಮಗಳೂರು

ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗೆ ಶಾಸಕರ ಆಕ್ರೋಶ

ಮೂಡಿಗೆರೆ: ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಾಸಕಿ ನಯನಾ ಮೋಟಮ್ಮ ಡಿಢೀರ್ ಭೇಟಿ ನೀಡಿ ಚಿಕಿತ್ಸೆಗೆ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವೈದ್ಯಾಧಿಕಾರಿಗಳ ಒಪಿಡಿ ಕೊಠಡಿ ಮುಂದೆ ರೋಗಿಗಳು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ವೈದ್ಯಾಧಿಕಾರಿಗಳು ಮಾತ್ರ ಇನ್ನು ಬಂದಿರಲಿಲ್ಲ. ಇದರಿಂದ ಕೆಂಡಮಂಡಲರಾದ ಶಾಸಕರು ಸಿಬ್ಬಂದಿಗಳನ್ನು ಕರೆದು ವೈದ್ಯಾಧಿಕಾರಿಗಳು ಎಲ್ಲಿ ಎಂದು ಪ್ರಶ್ನಿಸಿದರು. ಕೆಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ಸಿಬ್ಬಂದಿ ಉತ್ತರಿಸಿದಾಗ ಶಾಸಕರು ಆಪರೇಷನ್ ಥಿಯೇಟರ್‌ಗೆ ತೆರಳಿ ಪರಿಶೀಲಿಸಿದರು. ಅಲ್ಲಿ ಯೂ ವೈದ್ಯಾಧಿಕಾರಿಗಳು ಇರಲಿಲ್ಲ. ಇದರಿಂದ ಇನ್ನಷ್ಟು ಕೋಪಗೊಂಡ ಶಾಸಕರು ಸಿಬ್ಬಂದಿಗಳನ್ನು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು. ಟೋಕನ್ ಪಡೆದ ರೋಗಿಗಳಿಗೆ ಬೆಳಗ್ಗೆಯಿಂದಲೂ ವೈದ್ಯರು ಸಿಕ್ಕಿಲ್ಲ. ಒಪಿಡಿ ಮುಂದೆ ರೋಗಿಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ವೈದ್ಯರು ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ನಾನು ಶಾಸಕಿಯಾದ ನಂತರ ಹಲವಾರು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಸಭೆಗಳನ್ನು ನಡೆಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎಂದು ಹಲವು ಬಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರನ್ನು ಭೇಟಿ ಮಾಡಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ನೇಮಿಸುವ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗೆ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಆಸ್ಪತ್ರೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.