ಡಿ.ಎಸ್.ಸುರೇಶ್ 
ಚಿಕ್ಕಮಗಳೂರು

ಕೇಂದ್ರದ ಎನ್‌ಆರ್‌ಎಂಎಲ್ ಯೋಜನೆಯಲ್ಲಿ ಅವ್ಯವಹಾರ

ಜಿ.ಹೆಚ್. ಧನ್ಯಕುಮಾರ್
ತರೀಕೆರೆ: ಎನ್‌ಆರ್‌ಎಂಎಲ್ ಯೋಜನೆಯಲ್ಲಿ ಅವ್ಯವಹಾರ ನಡೆಯುವ ಜತೆಗೆ ತಾಲೂಕಿನ ಮುಡುಗೋಡು(ರಂಗೇನಹಳ್ಳಿ) ಗ್ರಾಮದಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂ. ಮೌಲ್ಯದ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು.
ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಹಸೀಲ್ದಾರ್ ನೀಡಿರುವ ಮಾಹಿತಿಯಂತೆ ನಕಲಿ ದಾಖಲೆ ಸೃಷ್ಟಿಸಿ ಮುಡುಗೋಡು ಗ್ರಾಮದ ಸರ್ವೇ ನಂ. 82ರಲ್ಲಿರುವ ಮೂರು ಕೋಟಿ ರೂ ಮೌಲ್ಯದ ಸಂತೆ ಮೈದಾನ ಜಾಗವನ್ನು ಇಬ್ಬರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ.ಈ ಹಗರಣದ ಹಿಂದೆ ಶಾಸಕ ಜಿ.ಎಚ್.ಶ್ರೀನಿವಾಸ್ ಕುಟುಂಬದ ಪಾತ್ರ ಇರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ದೂರಿದರು.
ಸಾರ್ವಜನಿಕರಿಗೆ ಸೇರಿದ ಸಂತೆ ಮೈದಾನ ಜಾಗದಲ್ಲಿ ಮತ್ತೆ ಮೂರ‌್ನಾಲ್ಕು ನಿವೇಶನವನ್ನು ಬೇರೆ,ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿರುವ ಮಾಹಿತಿ ಲಭ್ಯವಾಗಿದೆ. ಜನಪ್ರತಿನಿಧಿಗಳ ಕುಮ್ಮಕ್ಕಿಲ್ಲದೆ ಅಧಿಕಾರಿಗಳು ಈ ಕೆಲಸಕ್ಕೆ ಕೈ ಹಾಕುವುದಿಲ್ಲ. ಕೇಂದ್ರ ಸರ್ಕಾರದ ಎನ್‌ಆರ್‌ಎಂಎಲ್ ಯೋಜನೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾಹಿತಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಗಮನಕ್ಕೆ ತರಲಾಗಿದೆ. ತಕ್ಷಣ ನಿವೇಶನ ಹಂಚಿಕೆ ಹಗರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಹಾಗೂ ಎನ್‌ಆರ್‌ಎಂಎಲ್ ಅವ್ಯವಹಾರದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಮಹಿಳೆಯರನ್ನು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗೊಳಿಸಲು ಎನ್‌ಆರ್‌ಎಂಎಲ್ ಯೋಜನೆ ಜಾರಿಗೆ ತಂದಿದೆ. ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ 980 ಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳ ಒಕ್ಕೂಟಗಳಿದ್ದು, ಅಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೋಟ್ಯಾಂತರ ರೂ ಹಣ ದುರ್ಬಳಕೆಯಾಗಿರುವುದು ಲಭ್ಯವಾಗಿದೆ. ಶಾಸಕರ ಹಿಂಬಾಲಕರು ಎನ್‌ಆರ್‌ಎಂಎಲ್ ಯೋಜನೆ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳಿಗೆ ಧಮ್ಕಿ ಹಾಕಿ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಿಂದ ಸಹಿ ಹಾಕಿಸಿ ಲಕ್ಷಾಂತರ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎನ್‌ಆರ್‌ಎಂಎಲ್‌ನ ಸ್ವತಃ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಈ ಕುರಿತು ಸಂಸದರಿಗೆ ಮಾಹಿತಿ ನೀಡಲಾಗಿದ್ದು, ಅಧಿವೇಶನದ ಬಳಿಕ ಸಭೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.
ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಗರಗದಹಳ್ಳಿ ಪ್ರತಾಪ್ ಮತ್ತಿತರರಿದ್ದರು.