ಲಕ್ಕವಳ್ಳಿಯಲ್ಲಿ ಆಯೋಜಿಸಿದ್ದ ಕನ್ನಡ ಗೀತೆ ಹಾಡೋಣ ಭಾವಗೀತಾ ಶಿಬಿರವನ್ನು ವಾಣಿ ಶ್ರೀನಿವಾಸ್ ಉದ್ಘಾಟಿಸಿದರು. ಎಚ್.ವಿಶ್ವನಾಥ್, ಕೆ.ರವಿಕಿಶೋರ್ ಕುಂಚಾಲ, ಸಂಧ್ಯಾ ದತ್ತಾತ್ರಿ, ಸಿ.ಚಕ್ರವರ್ತಿ, ಆರ್.ನಾಗೇಶ್ ಇತರರಿದ್ದರು.
- ಕನ್ನಡ ಗೀತೆ ಹಾಡೋಣ
- ಕ್ರೀಡೆ, ಕಲೆ, ಸಾಹಿತ್ಯ,
ತರೀಕೆರೆ: ಮಕ್ಕಳು ಎಲ್ಲ ಕಲೆಗಳಂತೆ ಗಾಯನವನ್ನೂ ಶ್ರದ್ಧೆಯಿಂದ ಕಲಿಯಬೇಕು ಎಂದು ಜಿ.ಎಚ್.ಶ್ರೀನಿವಾಸ್ ಜನಹಿತ ಟ್ರಸ್ಟ್ ಅಧ್ಯಕ್ಷೆ ವಾಣಿ ಹೇಳಿದರು.
ಲಕ್ಕವಳ್ಳಿಯಲ್ಲಿ ಶ್ರೀ ಶಾರದಾ ಭಜನಾ ಮಂಡಳಿ ಹಾಗೂ ಶ್ರೀ ಶಂಕರ ಭಜನಾ ಮಂಡಳಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಗೀತೆ ಹಾಡೋಣ ಭಾವಗೀತಾ ಶಿಬಿರದಲ್ಲಿ ಮಾತನಾಡಿದರು. ಹಾಡುಗಾರಿಕೆ ಮನಸ್ಸಿಗೆ ನೆಮ್ಮದಿ ನೀಡಲಿದ್ದು, ಇಂಥ ಶಿಬಿರಗಳು ಮಕ್ಕಳ ಸಂಗೀತ, ಸಾಹಿತ್ಯಾಸಕ್ತಿಗೆ ಪೂರಕ ಎಂದರು.
ಎಚ್.ವಿಶ್ವನಾಥ್ ಮಾತನಾಡಿ, ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ ಇತರ ಕವಿಗಳಿಂದ ಕನ್ನಡ ಶ್ರೀಮಂತವಾಗಿದೆ. ಶಿಕ್ಷಣದ ಜತೆ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಅವಕಾಶವಿದ್ದು, ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ರವಿಕಿಶೋರ್ ಕುಂಚಾಲ ಮಾತನಾಡಿ, ಕನ್ನಡ ಗೀತೆ ಹಾಡೋಣ ಭಾವಗೀತಾ ಶಿಬಿರ ಗಾಯನದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಪ್ರೇರಣದಾಯಕ ಎಂದರು.
ಸುಗಮ ಸಂಗೀತಗಾರ ಉಪಾಸನಾ ಮೋಹನ್ ಮಾತನಾಡಿ, ಸಂಗೀತ, ಸಾಹಿತ್ಯದಿಂದ ಭಾಷಾ ಸಂಸ್ಕಾರ ಕಲಿಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಸಾಪ ಹೋಬಳಿ ಅಧ್ಯಕ್ಷ ಸಿ.ಚಕ್ರವರ್ತಿ ಮಾತನಾಡಿ, ಹಾಡುಗಾರಿಕೆ ಅಭ್ಯಾಸ ಧ್ಯಾನ ಮಾಡಿದಷ್ಟೇ ಪರಿಣಾಮಕಾರಿಯಾಗಿದೆ. ಸಂಗೀತಕ್ಕೆ ವಿವಿಧ ಕಾಯಿಲೆ ಗುಣಪಡಿಸುವ ಶಕ್ತಿ ಇದ್ದು, ಇದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಶಾರದಾ ಭಜನಾ ಮಂಡಳಿ ಅಧ್ಯಕ್ಷೆ ಸಂಧ್ಯಾ ದತ್ತಾತ್ರಿ, ಜಿಲ್ಲಾ ಜಾನಪದ ಪರಿಷತ್ ಸಂಚಾಲಕಿ ಎಸ್.ಗಾಯತ್ರಿ, ಹೋಬಳಿ ಘಟಕ ಅಧ್ಯಕ್ಷ ಕೆ.ಪಾಂಡುರಂಗ, ಪ್ರಮುಖರಾದ ಎಸ್.ರಮೇಶ್ ಮತ್ತಿತರರಿದ್ದರು.