ಕಳಸ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದಿಂದ ಏರ್ಪಡಿಸಿದ್ದ ಮುಂಗಾರು ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಜಾನಕಿ ಸುಂದರೇಶ್, ಮಮ್ತಾಜ್ ಬೇಗಂ, ಚಂಪಕಾ ರಾಘವೇಂದ್ರ, ಎಚ್.ಆರ್.ಪಾಂಡುರಂಗ ಇತರರಿದ್ದರು.
ಕಳಸ: ಮಾನಸಿಕ ನೆಮ್ಮದಿ ಪಡೆಯಲು ಸಾಹಿತ್ಯಕ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ ಎಂದು ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಬಿ. ಜೋಷಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕಳಸ ಮಹಿಳಾ ಘಟಕ ಮತ್ತು ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಮುಂಗಾರು ಸಾಹಿತ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಲ್ಲೂ ಪ್ರತಿಭೆ ಅಡಗಿರುತ್ತದೆ. ಆದರೆ ಅದನ್ನು ಪ್ರದರ್ಶಿಸಲು ಸೂಕ್ತ ಅವಕಾಶಗಳು ಸಿಗುವುದಿಲ್ಲ. ಇಂತಹ ವೇದಿಕೆಗಳು ಲಭ್ಯವಾದಾಗ ಮಾತ್ರ ಮಹಿಳೆಯರು ಪ್ರತಿಭೆ ಹೊರಹಾಕಲು ಸಾಧ್ಯ ಎಂದರು.
ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಮಾತನಾಡಿ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸುವುದು ನಿಜಕ್ಕೂ ಸವಾಲಿನ ಕೆಲಸ. ಸಾಹಿತ್ಯ ಪರಿಷತ್ ಮೂಲಕ ನಿರಂತರವಾಗಿ ಇಂಥ ಕಾರ್ಯಕ್ರಮ ಆಯೋಜಿಸಿ ಸಾಹಿತ್ಯ ಪ್ರೇಮಿಗಳನ್ನು ಒಗ್ಗೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮಹಿಳೆಯರಿಗಾಗಿ ಮುಂಗಾರು ಮಳೆ ಕುರಿತಾದ ವಿಶೇಷ ಸಂಗೀತ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಕೃಷ್ಣವೇಣಿ(ಪ್ರಥಮ), ನಗೀನಾ ಖಾದರ್(ದ್ವಿ) ಹಾಗೂ ಸುಚಿತ್ರಾ ಉದಯ್ ತೃತೀಯ ಬಹುಮಾನ ಪಡೆದರು.
ವೇದಿಕೆಯಲ್ಲಿ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಜಾನಕಿ ಸುಂದರೇಶ್, ಜಿಲ್ಲಾ ಸಂಚಾಲಕಿ ಮಮ್ತಾಜ್ ಬೇಗಂ, ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷೆ ಚಂಪಕಾ ರಾಘವೇಂದ್ರ, ಕಸಾಪ ಜಿಲ್ಲಾ ಸಂಚಾಲಕ ಎಚ್.ಆರ್.ಪಾಂಡುರಂಗ, ಮಹಿಳಾ ಮಂಡಳಿ ಅಧ್ಯಕ್ಷೆ ಕಿರಣ ಬ್ರಹ್ಮದೇವ, ಪ್ರಮುಖರಾದ ಅಜಿತ್‌ಕುಮಾರ್, ರಜಿತ್ ಕೆಳಗೂರು, ಕೃಷ್ಣಮೂರ್ತಿ, ಶೇಖರ ಶೆಟ್ಟಿ ಇತರರಿದ್ದರು