ಕಡೂರಿನ ಶಿವಗಂಗಾ ಗಿರಿ ಕ್ಷೇತ್ರದ ಶ್ರೀವೀರಭದ್ರೇಶ್ವರ ಸ್ವಾಮಿಯ ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ವಿಮಾನ ಗೋಪುರ ಕಳಸಾರೋಹಣ ಮಹೋತ್ಸವದ ಧಾರ್ಮಿಕ ಸಮಾರಂಭವನ್ನು ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಉದ್ಘಾಟಿಸಿದರು. 
ಚಿಕ್ಕಮಗಳೂರು

ಅತಿಯಾದ ಅಸೆಯಿಂದ ಮನಷ್ಯನ ಅವನತಿ

ಕಡೂರು: ಮನುಷ್ಯ ತಾನು ಮಾಡುವ ದಾನ, ಧರ್ಮಗಳಿಂದ ಶ್ರೇಷ್ಠನಾಗುತ್ತಾನೆ ಹೊರತು ತನ್ನ ಶ್ರೀಮಂತಿಕೆಯಿಂದಲ್ಲ, 12ನೇ ಶತಮಾನದಲ್ಲಿ ಬಸವಣ್ಣ ಲಿಂಗಧಾರಣೆ ಮಾಡಿ ದೇವಾಲಯಗಳ ಪ್ರವೇಶಕ್ಕೆ ಎಲ್ಲ ವರ್ಗದವರಿಗೂ ಮುಕ್ತ ಅವಕಾಶ ಕಲ್ಪಿಸಿಕೊಟ್ಟು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದರು ಎಂದು ಬೆಳಗಾವಿಯ ನಿಡಸೂಸಿ ಸಿದ್ದ ಸಂಸ್ಥಾನ ಮಠದ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.
ಶಿವಗಂಗಾ ಗಿರಿ ಕ್ಷೇತ್ರದ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ವಿಮಾನ ಗೋಪುರ ಕಳಸಾರೋಹಣ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯನ ತನ್ನ ಆಸೆಗಳು ಹೆಚ್ಚಾಗುತ್ತಾ ಹೋದಂತೆ ಸಮಾಜ ಮತ್ತು ದೇಶ ಅಳಿವಿನ ಹಂಚಿಕೆ ತಲುಪುತ್ತದೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಪರಿಪಕ್ವ ಭಕ್ತಿ ಅರ್ಪಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯುವಸಮೂಹ ಆಧ್ಯಾತ್ಮಿಕತೆ ಕಡೆಗೆ ಹೆಚ್ಚು ಗಮನಹರಿಸಿದಾಗ ಸಾಂಪ್ರದಾಯಿಕ ಬದುಕು ಉಳಿಸಲು ಸಾಧ್ಯ ಎಂದರು.
ಜನರು ದೇವರನ್ನು ಕಾಣಲು ದೇವಾಲಯಕ್ಕೆ ಹೋಗುತ್ತಾರೆ. ಆದರೆ ಮನುಷ್ಯ ತನ್ನಲ್ಲಿಯೇ ದೇವರನ್ನು ಕಾಣಬಹುದು. ಜಗತ್ತಿನಲ್ಲಿ ಯಾವುದೇ ಧರ್ಮ, ಜನಾಂಗದಲ್ಲಿ ದೇವಾಲಯ, ಮಂದಿರಗಳನ್ನು ನಿರ್ಮಿಸಿದರೂ ಸಹ ಅದರ ಮೂಲ ಉದ್ದೇಶ ಶಾಂತಿ ನೆಮ್ಮದಿ. ಸುಸಂಸ್ಕೃತ ಜೀವನ ನಡೆಸುವುದೇ ಇದರ ಮೂಲ ಆಶಯವಾಗಿದೆ. ಗ್ರಾಮೀಣ ಭಾಗದಲ್ಲಿನ ಮನೆಗಳಲ್ಲಿ ಆಚಾರ, ವಿಚಾರ ಕಡಿಮೆಯಾಗುತ್ತಿದೆ. ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಒಳ್ಳೆಯ ಸದ್ವಿಚಾರಗಳ, ಸಂಸ್ಕೃತಿಗಳನ್ನು ಅಳವಡಿಸಿಕೊಟ್ಟರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.